ಮೈಸೂರು: ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ ಅವರು ಹಚ್ಚಿ ಹೋಗಿರುವ ಭೂ ಮಾಫಿಯಾದ ಬೆಂಕಿ ಮಾತ್ರ ಇನ್ನೂ ಆರಿದಂತೆ ಕಾಣುತ್ತಿಲ್ಲ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ನಗರಪಾಲಿಕೆ ಆಯುಕ್ತೆ  ಶಿಲ್ಪನಾಗ್ ಅವರ ನಡುವಿನ ಕಿತ್ತಾಟ ಬೀದಿರಂಪವಾಗಿತ್ತು. ಈ ಕಾರಣಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಮೈಸೂರು ಮಾತ್ರವಲ್ಲ ರಾಜ್ಯದಾದ್ಯಂತ ಭೂಮಾಫಿಯಾ ಕ್ಕೆ ಮಣಿದು ಸರ್ಕಾರ ಡಿಸಿ  ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಗಳು ಸದ್ದು ಮಾಡುತ್ತಿವೆ.

ಭೂಮಾಫಿಯಾ ಬೆನ್ನಿಗೆ ನಿಂತು ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸದ್ಯಕ್ಕೆ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್ ಮತ್ತು ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ವಿಚಾರ ತೆರೆಮರೆಗೆ ಸರಿದು ಭೂಮಾಫಿಯಾದ ವಿಷಯ ಮುನ್ನಲೆಗೆ ಬಂದಿದೆ. ಅದು ಬೇರೆ ಬೇರೆ ರೀತಿಯಲ್ಲಿ ಪ್ರತಿಧ್ವನಿಸಲು ಆರಂಭಿಸಿದೆ.

ಸದ್ಯದ ಮಟ್ಟಿಗೆ ಶಾಸಕ ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳಿಗೆ ವೇದಿಕೆ ಮಾಡಿಕೊಟ್ಟಿದೆ. ಒಂದಷ್ಟು ರಾಜಕಾರಣಿಗಳು ಮೌನಕ್ಕೆ ಶರಣಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ  ಅವರು ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಖಚಿತವಾಗುತ್ತಿದ್ದಂತೆಯೇ ಫೇಸ್ ಬುಕ್  ಲೈವ್ ಗೆ ಬಂದು ಒಂದಷ್ಟು ಆರೋಪಗಳನ್ನು ಮಾಡಿದ್ದರು. ಅದಾದ ನಂತರ ಸಾ.ರಾ.ಮಹೇಶ್ ಒಂದಷ್ಟು ಸವಾಲ್ ಗಳನ್ನು ಹಾಕಿದ್ದರು.

ಇದೀಗ ಈ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿಯನ್ನು ಸರ್ಕಾರ ಮತ್ತೆ ಮೈಸೂರು ಡಿಸಿಯಾಗಿ ಕಳುಹಿಸದಿದ್ದರೆ ನಾವು ಅವರನ್ನು ಸಂಸದೆಯನ್ನಾಗಿ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂಬ ಸವಾಲ್ ಗಳು ಸಾರ್ವಜನಿಕ ವಲಯದಿಂದ ತೇಲಿ ಬರುತ್ತಿದೆ. ಜತೆಗೆ ಭೂಗಳ್ಳ ರಾಜಕಾರಣಿಗಳ ವಿರುದ್ಧ ರಾಜಕೀಯವಾಗಿಯೇ ಸೆಡ್ಡು ಹೊಡೆಯಿರಿ. ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರಿನಿಂದಲೇ ಸ್ಪರ್ಧಿಸಿ ಎಂಬ ಒತ್ತಾಯಗಳನ್ನು ಅಭಿಮಾನಿಗಳು ಮಾಡುದ್ದಾರೆ. ಇನ್ನೊಂದೆಡೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹರಿಗೆ ಸವಾಲಾಗಲಿದ್ದಾರೆ ಎಂಬಂತಹ ರೋಹಿಣಿ v/s ಪ್ರತಾಪ್ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ. ಜತೆಗೆ ನಮ್ಮ ಬೆಂಬಲ ರೋಹಿಣಿ ಸಿಂಧೂರಿಗೆ ಎನ್ನುವ ಬರಹಗಳು ಕಾಣಿಸುತ್ತಿವೆ.

ಇದೆಲ್ಲದರ ನಡುವೆ ಭೂಮಾಫಿಯಾವನ್ನು ಗುರಿಯಾಗಿಸಿಕೊಂಡು ಶಾಸಕ ಸಾ.ರಾ.ಮಹೇಶ್ ವಿರುದ್ಧ ಆಕ್ರೋಶದ ಕಿಡಿಕಾರುವುದರೊಂದಿಗೆ ಡಿಸಿ ರೋಹಿಣಿ ಸಿಂಧೂರಿ ಪರ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ. ಈ ಹಿಂದೆ ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರು ನೀಡಿದ ನಾಲ್ಕು ಆದೇಶದ ಬಗ್ಗೆಯೂ ಸೂಕ್ತ ಸಮಗ್ರ ಪರಿಶೀಲನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಸದ್ಯಕ್ಕೆ ಈ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಇಲ್ಲಿಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದೆ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

 

By admin