ಚಾಮರಾಜನಗರ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ತಾಲೂಕಿನ ಸಂತೇಮರಹಳ್ಳಿ ಬಳಿಯ ಮೂಗೂರು ಕ್ರಾಸ್‌ನಿಂದ ಸಂತೇಮರಹಳ್ಳಿ, ಕುದೇರಿನಿಂದ ಮರಿಯಾಲ ರಸ್ತೆ ಅಭಿವೃದ್ದಿ ಪಡಿಸುವ ೧೮ ಕೋಟಿ ರೂ ಗಳಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಮೂಗೂರು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮೂಗೂರು ಕ್ರಾಸ್ ನಿಂದ ಸಂತೇಮರಹಳ್ಳಿ ಸೇರುವ ರಸ್ತೆ ಅಭಿವೃದ್ದಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಕುದೇರು, ತೊರವಳ್ಳಿ, ಕಸ್ತೂರು, ಮರಿಯಾಲ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ನಡೆಸಲಾಗುತ್ತದೆ. ಕೆಲವು ಬಿಟ್ಟು ಹೋಗಿರುವ ಭಾಗಗಳನ್ನು ಸೇರ್ಪಡೆ ಮಾಡಿ ರಸ್ತೆ ಅಭಿವೃದ್ದಿ ಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಜನಪರ ಕೆಲಸಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮುಂದಿನ ಜನವರಿ ತಿಂಗಳೊಳಗೆ ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯನ್ನು ಪ್ರಾಮಾಣಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತಿದ್ದೇವೆ ಎಂದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಸಚಿವ ಸೋಮಣ್ಣನವರು ತುಂಬ ಚಟುವಟಿಕೆಯಿಂದ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಹಾಗೂ ಮತ್ತಷ್ಟು ಕಾಮಗಾರಿಗಳು ಅನುಮೋದನೆಗೊಳ್ಳಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ ಗಾಯಿತ್ರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.