ಚಾಮರಾಜನಗರ: ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ, ಕಳ್ಳ ಸಾಗಾಣಿಕೆ ಕುರಿತು ದೂರು ಬಂದಲ್ಲಿ ಅಧಿಕಾರಿಗಳು ಕೂಡಲೇ ಹೃದಯವಂತಿಕೆಯಿಂದ ಸ್ಪಂದಿಸಿ ನೆರವಿಗೆ ಧಾವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ರವರು ತಿಳಿಸಿದರು.
ನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕ ತಡೆಗಟ್ಟುವಿಕೆ ಕುರಿತಂತೆ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಗಳ ಬಗ್ಗೆ ನಡೆದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಸಮಾಜದಲ್ಲಿ ಇಂದು ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಈ ಕುರಿತು ಕಟ್ಟುನಟ್ಟಿನ ಕ್ರಮ ಕೈಗೊಳ್ಳಬೇಕು. ದೂರು ಬಂದ ಕೂಡಲೇ ಸಂತ್ರಸ್ತರಿಗೆ ಸ್ಪಂದಿಸಬೇಕು. ಇದನ್ನು ತಡೆಗಟ್ಟಲೆಂದೇ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಸದಸ್ಯರು, ಸ್ಡಯಂ ಸೇವಕರು, ಅರೇ ಸರ್ಕಾರಿ ಸಂಸ್ಥೆಗಳು ಪ್ರತಿ ಹಳ್ಳಿಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನ್ಯಾಯಾಧೀಶರಾದ ಬಿ.ಎಸ್. ಭಾರತಿಯವರು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಮಹಿಳೆ ಮತ್ತು ಮಕ್ಕಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಜೀತ, ಭಿಕ್ಷಾಟನೆ ಹಾಗೂ ಅಕ್ರಮ ಮಾರಾಟ ದಂಧೆಗಳಿಗೆ ಬಳಸಲಾಗುತ್ತಿದೆ. ಇದನ್ನು ತಡೆಗಟ್ಟಲೆಂದೇ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಅತೀ ಹೆಚ್ಚು ಮಾನವ ಕಳ್ಳ ಸಾಗಾಣಿಕೆ ಆಗುವ ಪ್ರದೇಶಗಳಲ್ಲಿ, ಜಾತ್ರೆಗಳಲ್ಲಿ ನಿಗಾ ವಹಿಸಬೇಕು. ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಕಾನೂನಿನಡಿಯಲ್ಲಿ  ಮಾನವ ಕಳ್ಳ ಸಾಗಾಣಿಕೆ ಮಾಡಿದರೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಕುರಿತು ಎಚ್ಚರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಮಾತನಾಡಿ ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಳ್ಳ ಸಾಗಾಣಿಕೆ ತಡೆಯುವ ಸಂಬಂಧ ರೂಪಿತವಾಗಿರುವ ಕಾಯ್ದೆಯ ಸಮರ್ಪಕ ಅನುಷ್ಠಾನವಾಗಬೇಕು. ದೂರು ಬಂದಾಗ ಅಧಿಕಾರಿಗಳು ಸಂವೇದನೆಯಿಂದ ವರ್ತಿಸಬೇಕು. ದೂರುದಾರರನ್ನೇ ಹೆಚ್ಚು ಮಾನಸಿಕ ಖಿನ್ನತೆಗೆ ಒಳಪಡಿಸದೇ ಸಕ್ರಿಯವಾಗಿ ಸ್ಪಂದಿಸುವ ಜನಸ್ನೇಹಿ ಕೆಲಸ ಆಗಬೇಕು ಎಂದರು.
ಸಮೀಕ್ಷೆಯ ಪ್ರಕಾರ ದೇಶದಲ್ಲಿ ೮ ನಿಮಿಷಕ್ಕೆ ಒಬ್ಬರು ಕಾಣೆಯಾಗುತ್ತಿದ್ದು, ಕೇವಲ ಶೇ.೩೦ ರಷ್ಟು ಮಾತ್ರ ದೂರು ದಾಖಲಾಗುತ್ತಿದೆ. ಕಾಣೆಯಾದವರ ಕುರಿತು, ಭಿಕ್ಷಾಟನೆ, ವೇಶ್ಯವಾಟಿಕೆ, ಬಾಲಕಾರ್ಮಿಕ ಪದ್ದತಿ ಕಂಡು ಬಂದಲ್ಲಿ ಪೊಲೀಸ್ ಠಾಣೆಗಳಿಗೆ ದೂರು ನೀಡಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಎಂ. ಶ್ರೀಧರ ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾದ ವಿಲಿಯಂ ಕ್ರಿಸ್ಟೋಪರ್ ಅವರು ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯನ್ನು ಸಂವಿಧಾನಾತ್ಮಕವಾಗಿ ಪರಿಚ್ಚೇದ ೨೩ರಲ್ಲಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರವು ಮಾನವ ಕಳ್ಳ ಸಾಗಾಣಿಕೆಯನ್ನು ಸಂಘಟಿತ ಅಪರಾಧವಾಗಿದೆ ಎಂದು ಹೇಳಿದೆ. ಐ.ಪಿ.ಸಿ ಸೆಕ್ಷನ್ ೩೭೦ರ ಪ್ರಕಾರ ಕನಿಷ್ಟ ೭ ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.
ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಧಿಕಾರಿಗಳು ಮಾನವ ಕಳ್ಳ ಸಾಗಾಣಿಕೆ ಮುಕ್ತ ರಾಜ್ಯವನ್ನಾಗಿ ಮಾಡಲು ಕೈಜೋಡಿಸಬೇಕು ಎಂದು ವಿಲಿಯಂ ಕ್ರಿಸ್ಟೋಪರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಸರ್ಕಾರಿ ವಕೀಲರಾದ ಎಸ್. ಗುರುಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸರಸ್ವತಿ ಇನ್ನಿತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.