ಚಾಮರಾಜನಗರ: ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನಪುರಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ನಗರದ ಹೊರವಲಯದಲ್ಲಿರುವ ಉತ್ತುವಳ್ಳಿ ಗ್ರಾಮದ ಗಿರೀಶ್ ಗಾರ್ಮೆಂಟ್ಸ್ ತರಬೇತಿ ಕೇಂದ್ರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಮಾನವ ಹಕ್ಕುಗಳಿಗೆ ಆಗುತ್ತಿರುವ ದೌರ್ಜನ್ಯ ಕುರಿತು ನಾಗರಿಕರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿರುತ್ತದೆ. ಪ್ರತಿಯೊಬ್ಬರೂ ಕಾನೂನು ಅರಿವಿನ ಜೊತೆಗೆ ಮಾನವ ಹಕ್ಕುಗಳ ಕುರಿತು ಜಾಗೃತಿ ಹೊಂದಿರಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಅರಿತು ಪ್ರತಿಯೊಬ್ಬರು ಕಾನೂನಿನ ನೆರವು ಪಡೆಯಲು ಯಾರೂ ವಂಚಿತರಾಗಬಾರದು. ಪ್ರಸ್ತುತ ಸಮಾಜದಲ್ಲಿ ಎಲ್ಲಾ ವರ್ಗದ ನೊಂದ ಮಹಿಳೆಯರು ಸಹ ಕಾನೂನುಗಳನ್ನು ಗೌರವಿಸಿ, ಪಾಲಿಸುವುದು ತುಂಬಾ ಅವಶ್ಯಕವಾಗಿದೆ ಎಂದರು.
ಸಾರ್ವಜನಿಕರು ಕಾನೂನು ನೆರವು ಬೇಕಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಕಾನೂನಿನ ನೆರವು ಹಾಗೂ ಸಲಹೆಯನ್ನು ಪಡೆಯಬಹುದಾಗಿದೆ. ಜಿಲ್ಲೆಯಾದ್ಯಂತ ಡಿಸೆಂಬರ್ ೧೮ರಂದು ಮೆಗಾ ಲೋಕ್ ಅದಾಲತ್ (ಜನತಾ ನ್ಯಾಯಾಲಯ) ಅನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶ್ರೀಧರ್ ಅವರು ತಿಳಿಸಿದರು.
ಗಿರೀಶ್ ಗಾರ್ಮೆಂಟ್ಸ್‌ನ ವ್ಯವಸ್ಥಾಪಕರಾದ ಲಕ್ಷ್ಮಣ, ಜಿಲ್ಲಾ ಕಾರ್ಮಿಕಾಧಿಕಾರಿ ಮಹದೇವಸ್ವಾಮಿ, ಯೋಜನಾ ನಿರ್ದೇಶಕರಾದ ಮಹೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
