ಗುಂಡ್ಲುಪೇಟೆ: ಸಕಾಲಕ್ಕೆ ಸಾಲ ಮರು ಪಾವತಿ ಮಾಡುವ ಮೂಲಕ ಹೊಸ ರೈತರಿಗೆ ಸಾಲ ನೀಡಲು ಅನುಕೂಲ ಮಾಡಿಕೊಡಬೇಕೆಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್. ಮಲ್ಲೇಶ್ ಮನವಿ ಮಾಡಿದರು.

ಪಟ್ಟಣದ ಲ್ಯಾಂಪ್ ಸೊಸೈಟಿಯಲ್ಲಿ ನಡೆದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ 2019-20ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರು ಸಾಲಮನ್ನಾ ಆಗುತ್ತದೆ ಎಂದು ಪಡೆದ ಸಾಲ, ಬಡ್ಡಿ ಪಾವತಿ ಮಾಡದೆ ಇರುವ ಹಿನ್ನೆಲೆಯಲ್ಲಿ ಪ್ರಸ್ತುತ ಪಿಎಲ್‍ಡಿ ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿದೆ ಎಂದರು.

ರಾಜಕಾರಣಿಗಳು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ ಸಾಲ ಮನ್ನಾ ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹಲವು ಮಂದಿ ರೈತರು ಹಣ ಕಟ್ಟಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ಜನರು ತಾವು ಪಡೆದ ಸಾಲಕ್ಕಿಂತ ಬಡ್ಡಿಯೇ ಹೆಚ್ಚಾಗಿರುತ್ತದೆ. ಕೇವಲ ರಾಜಕಾರಣಿಗಳ ತಪ್ಪಿನಿಂದ ನಿಷ್ಠಾವಂತ ರೈತರಿಗೆ ತೊಂದರೆಯಾಗುತ್ತಿದೆ ಎಂದರು.

ಹಲವು ಮಂದಿ ಬಡ ರೈತರು ತಾವು ಪಡೆದ ಸಾಲವನ್ನು ಹೆದರಿಕೆಯಿಂದ ಸಮಯಕ್ಕೆ ಸರಿಯಾಗಿ ಕಟ್ಟುತ್ತಿದ್ದಾರೆ. ಆದರೆ ಶ್ರೀಮಂರು ಎನಿಸಿಕೊಂಡ ವ್ಯಕ್ತಿಗಲೇ ಸರಿಯಾದ ರೀತಿಯಲ್ಲಿ ಪಾವತಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಬ್ಯಾಂಕ್ ವತಿಯಿಂದ ಮುಂದಿನ ದಿನಗಳಲ್ಲಿ ಒಬ್ಬ ರೈತನಿಗೆ 10 ಲಕ್ಷದ ವರೆಗೂ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಪಿಎಲ್‍ಡಿ ಬ್ಯಾಂಕ್‍ಗೆ ಸರ್ಕಾರ ನೀಡುತ್ತಿರುವ ಅನುದಾನ ಸಾಕುಗುತ್ತಿಲ್ಲ. ಈ ಬಗ್ಗೆ ಶಾಸಕ ನಿರಂಜನಕುಮಾರ್ ಗಮನಕ್ಕೆ ತಂದಿದ್ದು, ಅವರು ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸಿ ಅನುದಾನ ಹೆಚ್ಚಳ ಮಾಡಿಸುವಂತೆ ಅಭಯ ನೀಡಿದ್ದಾರೆ ಎಂದರು.

ಪ್ರಸ್ತುತ ಸಾಲಿನಲ್ಲಿ 141 ರೈತರು ಹೊಸದಾಗಿ ಬ್ಯಾಂಕಿನ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಸಾಲಾಖೈರಿಗೆ 4183 ‘ಎ’ ತರಗತಿಯ ಸದಸ್ಯರು ಇರುತ್ತಾರೆ. ಸದಸ್ಯರಿಂದ ಷೇರು ಬಂಡವಾಳವು ವರ್ಷಕ್ಕೆ 55.18 ಲಕ್ಷ ರೂ.ಗಳಿಗೆ ಮುಟ್ಟಿದೆ. ಅಲ್ಲದೆ ಸರ್ಕಾರದಿಂದ 3.70 ಲಕ್ಷ ರೂ.ಗಳ ಪಾಲು ಬಂಡವಾಳವು ಲಭ್ಯವಿದೆ ಎಂದು ಹೇಳಿದರು.

2020-21ನೇ ಸಾಲಿನಲ್ಲಿ 187.35 ಲಕ್ಷ ರೂ.ಗಳ ಸಾಲ ಯೋಜನೆ ಜಾರಿಯಲ್ಲಿದ್ದು, ಈ ಸಾಲ ಪಡೆಯಲು ಶೇ.6, ಶೇ.4 ಮತ್ತು ಶೇ.3ರ ಬಡ್ಡಿ ದರದಲ್ಲಿ ನೀಡಿರುವ ಸಾಲಗಳ ತಗಾದೆಯ ಪೈಕಿ ಶೇ.80ರಷ್ಟು ಸಾಲ ವಸೂಲಾತಿಯನ್ನು ಸಾಧಿಸಬೇಕಿದೆ. ಇದುವರೆಗೆ ಶೇ.32.33 ರಷ್ಟು ವಸೂಲಾಗಿದ್ದು, ಇನ್ನೂ ಶೇ. 34.22 ರಷ್ಟು ವಸೂಲಾಗಬೇಕಿದೆ. ಆದ್ದರಿಂದ ಶೇ.6, ಶೇ.4 ಮತ್ತು ಶೇ.3ರ ಬಡ್ಡಿ ದರದಲ್ಲಿ ಸಾಲ ಪಡೆದಿರುವ ಸಾಲಗಾರರು ತುರ್ತಾಗಿ 2019-20 ನೇ ಸಾಲಿನ ಸುಸ್ತಿ ಕಂತನ್ನು ಬ್ಯಾಂಕಿಗೆ ಮರುಪಾವತಿಸಬೇಕು ಎಂದರು.

ಸಭೆಯಲ್ಲಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷರಾದ ಗೌರಮ್ಮ, ನಿರ್ದೇಶಕರಾದ ಎಸ್. ಶಿವಬಸಪ್ಪ, ಎಸ್.ಎಂ. ಮಲ್ಲಿಕಾರ್ಜುನ, ಹೆಚ್.ಎಂ. ಮಹೇಶ್, ಶಿವಣ್ಣ, ಸಿ.ಜಿ. ನಾಗೇಂದ್ರ, ಹೆಚ್.ಐ. ಬಸವರಾಜು, ಈಶ್ವರಪ್ಪ, ಎಸ್. ಬಸವಣ್ಣ, ಮಹೇಶ್, ಡಿ.ಎಸ್. ಶಿವಸ್ವಾಮಿ, ಕೂಸಯ್ಯ, ದೇವಮ್ಮ, ಮಹದೇವಪ್ಪ, ಎಂ. ಆನಂದ, ಡಿ. ರಾಜು, ಸುಮಿತ್ರ, ಮಹೇಶ್, ಬಿ. ಬಾಲಸುಬ್ರಮಣ್ಯ, ಎಂ. ಸಂಜಯ್, ಜಿ.ಎಂ. ಮಹದೇವಯ್ಯ, ಜಿ.ಎ. ನಾಗೇಂದ್ರ ಸೇರಿದಂತೆ ಹಲವು ಮಂದಿ ರೈತರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin