
ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಶುಕ್ರವಾರ ಮಂಟೇಸ್ವಾಮಿ, ಲಿಂಗಮ್ಮತಾಯಿ, ದೊಡ್ಡಮ್ಮತಾಯಿ ಹಾಗೂ ಸಿದ್ದಪ್ಪಾಜಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.
ಕೊಂಡೋತ್ಸವದ ಅಂಗವಾಗಿ ಲಿಂಗಮ್ಮತಾಯಿ ದೇವಾಲಯ ಸೇರಿದಂತೆ ಗ್ರಾಮದ ಪ್ರತಿಮನೆಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೊಂಡೋತ್ಸವಕ್ಕೂ ಮುನ್ನ ಬ್ಯಾಡಮೂಡ್ಲು ಗ್ರಾಮದ ಕೊಳದಪಕ್ಕದ ದೇವಾಲಯದ ಬಳಿ ಸತ್ತಿಗೆ, ಸುರಾಪಾಣಿ, ಕಂಡಾಯಗಳನ್ನು ಸ್ವಚ್ಛಗೊಳಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.
ನಂತರ ಮಂಗಳವಾದ್ಯ ನಿನಾದದೊಂದಿಗೆ ದೊಣ್ಣೆವರಸೆ, ಕಂಸಾಳೆ ಸೇರಿದಂತೆ ನಾನಾಕಲಾತಂಡಗಳ ಜತೆ ಕಂಡಾಯಗಳ ಮೆರವಣಿಗೆ ಕೊಂಡದ ಗುಳಿಬಳಿ ಸಮಾವೇಶಗೊಂಡಿತು.
ಬೆಳಗ್ಗೆ ೧೦ರವೇಳೆಗೆ ಮಂಟೇಸ್ವಾಮಿ, ಲಿಂಗಮ್ಮತಾಯಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ ಕೊಂಡವನ್ನು ದೇವರಗುಡ್ಡಪ್ಪರು ಹಾಯ್ದರು.
ಕೊಂಡೋತ್ಸವಕ್ಕೆ ಚಾಮರಾಜನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಚಿಕ್ಕಮೋಳೆ, ಚಂದುಕಟ್ಟೆಮೋಳೆ, ಹರದನಹಳ್ಳಿಬಂಡಿಗೆರೆ, ತಾವರೆಕಟ್ಟೆಮೋಳೆ ಬ್ಯಾಡಮೂಡ್ಲು ಗ್ರಾಮಗಳ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು. ಕೊಂಡೋತ್ಸವದ ನಂತರ ಭಕ್ತಾದಿಗಳು ಸರತಿಸಾಲಿನಲ್ಲಿ ಪೂಜೆಸಲ್ಲಿಸಿದರು. ಗ್ರಾಮದ ಪ್ರತಿಮನೆಗಳಲ್ಲೂ ನೆಂಟರಿಷ್ಟರ ಕಲರವ ಮೇಳೈಸಿತ್ತು.
