ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರು ವುದರಿಂದ ಚಿಕ್ಕಚಿಕ್ಕ ಜ್ವರ ಕಾಣಿಸಿಕೊಂಡರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಯಾರಿಗೆ ಬೆಡ್‌ಗಳ ಅವಶ್ಯಕತೆ ಇರುತ್ತೋ ಅಂತಹವರಿಗೆ ಬೆಡ್‌ಗಳು ಸಿಗುತ್ತಿಲ್ಲ. ಹೀಗಾಗಿ ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಿ, ಈ ರೀತಿ ದಾಖಲಾಗುವವರಿಗೆ ಮನವರಿಕೆ ಮಾಡಿಕೊಡುವುದರಿಂದ ಆಸ್ಪತ್ರೆಗಳ ಮೇಲಿರುವ ಒತ್ತಡ ಕಡಿಮೆಯಾಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಬೆಡ್‌ಗಳನ್ನು ಹೀಗೆ ಪಡೆದುಕೊಳ್ಳುವುದರಿಂದ ಸಾಮಾನ್ಯವಾಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪ್ರಾಥಮಿಕ ಲಕ್ಷಣಗಳು ಕಂಡು ಬಂದರೂ ಆಸ್ಪತ್ರೆಗೆ ಬರುವರು. ಅವರಿಗೆ ಹೋಂ ಐಸೋಲೇಷನ್ ಮಾಡಿ ಎಂದು ತಿಳಿಸಿದರು.


ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಶೇ.೫೦ ರಷ್ಟು ಬೆಡ್‌ಗಳು ನೀಡಬೇಕು ಎಂದು ತಿಳಿಸಲಾಗಿತ್ತು. ಆದರೆ ಕೋವಿಡ್ ಪ್ರಕರಣಗಳು ಪ್ರತಿನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೇ.೭೫ ರಷ್ಟು ಬೆಡ್‌ಗಳನ್ನು ನೀಡಬೇಕು ಎಂಬ ಆದೇಶ ಬಂದಿದೆ. ಕೋವಿಡ್ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸಿದರೆ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ. ಇದರಿಂದಅಕ್ಕಪಕ್ಕದವರು ಎಚ್ಚೆತ್ತುಕೊಳ್ಳುವಂತಾಗಲಿ. ಅನಗತ್ಯವಾಗಿ ವಾಹನಗಳು ರಸ್ತೆಗಳಿದರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಿ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್‌ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಸಿ.ಬಿ.ರಿಷ್ಯಂತ್,ತ್ಜಿಪಂ ಸಿಇಓ ಎ.ಎಂ.ಯೋಗೀಶ್, ಮೈಸೂರು ನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಟೇಶ್, ಡಿಸಿಪಿ ಪ್ರಕಾಶ್‌ಗೌಡ್ ಸೇರಿದಂತೆ ಹಲವರು ಇದ್ದರು.

By admin