ಮಡಿಕೇರಿ: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟು ಬಳಿಕ ತೆಲುಗು, ತಮಿಳಿನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ.
ಕೊಡಗಿನ ವಿರಾಜಪೇಟೆಯ ಮುಂಡಚಾಡಿರ ಮದನ್ ಮಂದಣ್ಣ ಹಾಗೂ ಸುಮನ್ ದಂಪತಿಯ ಪುತ್ರಿ ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರದಲ್ಲಿ ಅದೃಷ್ಟವಂತರು ಎನ್ನಬೇಕು. ಮೊದಲ ಸಿನಿಮಾದಿಂದಲೇ ಅವರ ಅದೃಷ್ಟ ಬಾಗಿಲು ತೆರೆದಿದ್ದು ಯಶಸ್ವಿ ನಟಿ ಎನಿಸಿಕೊಂಡರು. ಕನ್ನಡ ಚಿತ್ರರಂಗವಲ್ಲದೆ, ತಮಿಳು, ತೆಲುಗು ಸಿನಿಮಾಗಳಲ್ಲಿ ಅವಕಾಶ ದೊರೆಯುವುದರೊಂದಿಗೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನ್ನ ಛಾಪು ಮೂಡಿಸಿದರು. ಈಗಾಗಲೂ ಹಲವು ಸ್ಟಾರ್ ನಟರೊಂದಿಗೆ ನಟಿಸಿರುವ ರಶ್ಮಿಕಾ ಮಂದಣ್ಣ ಸದ್ಯ ಬೇಡಿಕೆಯಲ್ಲಿರುವ ನಟಿ ಎಂದರೆ ತಪ್ಪಾಗಲಾರದು.
ಈಗ ಬಾಲಿವುಡ್ ನಿಂದಲೂ ಅವಕಾಶಗಳು ಹುಡುಕಿಕೊಂಡು ಬಂದಿದ್ದು, ಹಿಂದಿಯ ಮಿಷನ್ ಮಜ್ನು ಎಂಬ ಚಿತ್ರದಲ್ಲಿ ಇವರು ಸಿದ್ದಾರ್ಥ್ ಮಲ್ಲೋತ್ರ ರಿಗೆ ನಾಯಕಿ ನಟಿಯಾಗಿ ಅಭಿನಯಿಸಲು ಅವಕಾಶ ದೊರೆತಿದೆ. ಮೊದಲ ಬಾರಿಗೆ ಬಾಲಿವುಡ್‌ನತ್ತ ಮುಖ ಮಾಡಿರುವ ರಶ್ಮಿಕಾ ಮಂದಣ್ಣನಿಗೆ ಅಲ್ಲೊಂದು ವೇಳೆ ಯಶಸ್ಸು ಸಿಕ್ಕಿದ್ದೇ ಆದರೆ ಮತ್ತೆ ತಿರುಗಿ ನೋಡುವ ಮಾತೇ ಇಲ್ಲ ಎನ್ನಬಹುದು.
ಇದುವರೆಗೆ ಕನ್ನಡದಲ್ಲಿ ಪೊಗರು, ತಮಿಳಿನಲ್ಲಿ ಸುಲ್ತಾನ್, ತೆಲುಗಿನಲ್ಲಿ `ಪುಷ್ಪ’, ಅಡವಲ್ಲುಮೀಕು ಜೋಹರ್ಲು ಮೊದಲಾದ ಚಿತ್ರದಲ್ಲಿ ನಟಿಸಿದ್ದು ಬಹುಬೇಗನೇ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆವೂರುವಲ್ಲಿ ಯಶಸ್ವಿಯಾಗಿದ್ದಾರೆ. `ನ್ಯಾಷನಲ್ ಕ್ರಷ್’ ಎಂಬ ಬಿರುದು ಬಂದಿರುವುದು ವಿಶೇಷವಾಗಿದೆ.