* ಮೈಸೂರು ಮೆಡಿಕಲ್ ಕಾಲೇಜು ಪುರುಷರ ಹಾಸ್ಟೆಲ್ ಗೆ ಭೇಟಿ

* ಶೀಘ್ರ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಜೊತೆ ಚರ್ಚೆ

* ಮೈಸೂರು ಅಭಿವೃದ್ಧಿ ನನ್ನ ಗುರಿ

* ಗಮನಕ್ಕೆ ಬಂದರೆ ತಕ್ಷಣ ಸ್ಪಂದಿಸುವ ಜಾಯಮಾನ ನನ್ನದು; ಸಚಿವ ಸೋಮಶೇಖರ್

ಮೈಸೂರು: ಇಲ್ಲಿನ ಮೈಸೂರು ಮೆಡಿಕಲ್ ಕಾಲೇಜು ಪುರುಷರ ಹಾಸ್ಟೆಲ್ ಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಶಿಥಿಲಗೊಂಡ ಕಟ್ಟಡ ಹಾಗೂ ಕೊಠಡಿಗಳನ್ನು ವೀಕ್ಷಣೆ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜ್ ಆ್ಯಂಡ್ ರೀಸರ್ಚ್ ಸೆಂಟರ್ ಡೀಮ್ ನಂಜರಾಜ್ ಹಾಸ್ಟೆಲ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.

ಇಂಥ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇರುವ ಬಗ್ಗೆ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಸಂಬಂಧ ಶೀಘ್ರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಜೊತೆಗೆ ದುರಸ್ತಿಗೆ ಬೇಕಾಗಿರುವ ಅನುದಾನವನ್ನು ಮಂಜೂರು ಮಾಡಿಸಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ಏಳೂವರೆ ಕೋಟಿ ರೂಪಾಯಿ ಬೇಕೆಂಬ ಬಗ್ಗೆ ಈ ಹಿಂದೆ ಅಂದಾಜು ಮಾಡಲಾಗಿತ್ತು. ಈಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಅಂದಾಜು ವೆಚ್ಚಕ್ಕಿಂತ ಶೇ.10ರಿಂದ ಶೇ. 15 ರಷ್ಟು ವೆಚ್ಚ ಹೆಚ್ಚಾಗಬಹುದು. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನಾನು ಮೈಸೂರು ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು, ಜನಪ್ರತಿನಿಧಿಗಳು ಇಲ್ಲವೇ ಸಾರ್ವಜನಿಕರಿಂದ ಗಮನಕ್ಕೆ ಬಂದರೆ ತಕ್ಷಣ ಸ್ಪಂದಿಸುವ ಜಾಯಮಾನ ನನ್ನದು. ದೇಶದಲ್ಲೇ ಎರಡನೇ ಅತಿದೊಡ್ಡ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 2 ಕೋಟಿ ರೂಪಾಯಿ ಅನುದಾನ ಬೇಕೆಂಬ ಬಗ್ಗೆ ನನ್ನ ಗಮನಕ್ಕೆ ಈಚೆಗೆ ಬಂತು. ತಕ್ಷಣ ನಾನು ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರನ್ನು ಭೇಟಿಯಾಗಿ ಚರ್ಚಿಸಿದೆ. ಬಳಿಕ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಹಾಗೂ ಮೈಸೂರು ಜನಪ್ರತಿನಿಧಿಗಳ ಸಭೆ ನಡೆಸಿ ಹೆಚ್ಚುವರಿ 18 ಕೋಟಿ ರೂಪಾಯಿಗಳ ಅನುದಾನಕ್ಕೆ ಒಪ್ಪಿಗೆ ಪಡೆಯಲು ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡುವ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ನಾನು ತಕ್ಷಣವೇ ಸ್ಪಂದಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ, ಶಾಸಕರಾದ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

By admin