ಮೈಸೂರು: ಶಿಕ್ಷಕರ ನೇಮಕದಲ್ಲಿ ರಂಗಕಲೆಗೂ ಅವಕಾಶ ಕಲ್ಪಿಸುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ
ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿರುವ ಅವರು, ನೂತನವಾಗಿ ಹೊರಡಿಸಲಾಗುವ ಅಧಿಸೂಚನೆಯಲ್ಲಿ ಚಿತ್ರಕಲೆ, ಸಂಗೀತ ಮತ್ತು ರಂಗಕಲೆಯನ್ನು ಸೇರಿಸುವ ಖಚಿತ ಭರವಸೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಾಲಾ-ಕಾಲೇಜುಗಳಿಗೆ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆಯಿಂದ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಇದು ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಅಧಿಕೃತ ಅಧಿಸೂಚನೆಯಾಗಿರಲಿಲ್ಲ. ಈ ಕರಡು ಅಧಿಸೂಚನೆಯಲ್ಲಿ ಶಿಕ್ಷಕರ ನೇಮಕದಲ್ಲಿ ಚಿತ್ರಕಲೆ ಮತ್ತು ಸಂಗೀತಕ್ಕೆ ಅವಕಾಶ ಕಲ್ಪಿಸಿದ್ದು, ಈ ಕಲೆಗಳಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ನೇಮಕಕ್ಕೆ ಅವಕಾಶವಿತ್ತು. ಈ ಕರಡು ಅಧಿಸೂಚನೆಯಲ್ಲಿ ರಂಗಶಿಕ್ಷಕರ (ನಾಟಕ ಶಿಕ್ಷಕರು) ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ. ಇದು ರಂಗ ಕಲಾವಿದ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಶಿವಮೊಗ್ಗ ರಂಗಾಯಣದ ಸಂದೇಶ್ ಜವಳಿ, ಕಲಬುರಗಿ ರಂಗಾಯಣದ ಪ್ರಭಾಕರ್ ಜೋಶಿ, ನಾಟಕ ಅಕಾಡೆಮಿಯ ಅಧ್ಯಕ್ಷ ಆರ್. ಭೀಮಸೇನ, ರಂಗಕರ್ಮಿ ಬಿ.ವಿ. ರಾಜಾರಾಂ, ಪ್ರಭುದೇವ್ ಕಪ್ಪಗಲ್‌ರವರು, ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ ಅವರಿದ್ದ ನಿಯೋಗ ಶಿಕ್ಷಣ ಸುರೇಶ್‌ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಚರ್ಚಿಸಿ ಮನವಿ ಪತ್ರ ಸಲ್ಲಿಸಿ ರಂಗಶಿಕ್ಷಕರಿಗೂ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಲಾಗಿತ್ತು.
ಈ ಹಿಂದೆ ರಂಗಾಯಣ ಮೈಸೂರು ವಿಸ್ತೃತವಾದ ಪತ್ರವೊಂದನ್ನು ಬರೆದು ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೂಡ ರಂಗಭೂಮಿಯ ಮೂಲಕ ಶಿಕ್ಷಣ ಎಂಬ ಅಂಶವನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಇದೆಲ್ಲವನ್ನು ಗಮನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕರ ನೇಮಕದಲ್ಲಿ ರಂಗಕಲೆಗೂ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ನೂತನವಾಗಿ ಹೊರಡಿಸಲಾಗುವ ಅಧಿಸೂಚನೆಯಲ್ಲಿ ಚಿತ್ರಕಲೆ, ಸಂಗೀತ ಮತ್ತು ರಂಗಕಲೆಯನ್ನು ಸೇರಿಸುವ ಖಚಿತ ಭರವಸೆಯನ್ನು ನೀಡಿದ್ದಾರೆ
ಈಗಾಗಲೇ ಕಲ್ಯಾಣ ಕರ್ನಾಟಕದ ಅಧಿಸೂಚನೆ ಹೊರಬಿದ್ದಿದ್ದು, ಇದುವರೆಗೆ ನೇಮಕಗೊಂಡ 66 ರಂಗಶಿಕ್ಷಕರಲ್ಲಿ 13 ಜನ ರಂಗಶಿಕ್ಷಕರು ನಿವೃತ್ತಿಗೊಂಡಿದ್ದು, ಇದೀಗ 13 ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.