ಚಾಮರಾಜನಗರ: ಮುಂಬರುವ ಮೇ ೩ರಂದು ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸೌಹಾರ್ದ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ರಂಜಾನ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಎಲ್ಲಾ ಬಗೆಯ ಸಹಕಾರ ನೀಡಲಿದೆ. ಸೌಹಾರ್ದಯುತವಾಗಿ ಹಬ್ಬ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ಮುಸ್ಲಿಂ ಸಮುದಾಯದ ಮುಖಂಡರಾದ ಮಹಮ್ಮದ್ ಜಿಯಾವುಲ್ಲಾ ಅವರು ಮಾತನಾಡಿ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಲಿದ್ದೇವೆ. ಜಿಲ್ಲಾಡಳಿತ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸೌಹಾರ್ದತಾ ಸಭೆ ಕರೆದಿರುವುದಕ್ಕೆ ಕೃತಜ್ಞತೆ ಸಲ್ಲಿಸುದಾಗಿ ನುಡಿದರು.
ಇನ್ನಿತರ ಮುಖಂಡರು ಮಾತನಾಡಿ ಹಬ್ಬದ ದಿನದಂದು ಪ್ರಾರ್ಥನೆಗೆ ತೆರಳುವ ಸಮಯದಲ್ಲಿ ಸಂಚಾರ ಸುಗಮ ವ್ಯವಸ್ಥೆಗೆ ಕ್ರಮ ವಹಿಸಬೇಕಿದೆ. ಬಡಾವಣೆಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಆಗಬೇಕಿದೆ. ವಿದ್ಯುತ್ ಪೂರೈಕೆಗೆ ಅಡಚಣೆಯಾಗದಂತೆ ವ್ಯವಸ್ಥೆ ಕೈಗೊಳ್ಳಬೇಕಿದೆ. ಸ್ವಚ್ಚತೆ ಕಾರ್ಯಗಳು ಆಗಬೇಕಿದೆ. ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಲಿದ್ದೇವೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್ ಅವರು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳಿಗೆ ಸಿದ್ದತೆ ಮಾಡಿ ಕೊಂಡಿದ್ದೇವೆ. ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಅಪ್ಸರ್ ಪಾಷ, ವಕ್ಫ್ ಅಧಿಕಾರಿ ಆಸೀಫ್ ಖಾನ್, ಮುಖಂಡರಾದ ನಹೀಮ್ ಉಲ್ ಹಕ್, ವಾಸಿಂ ಪಾಷಾ, ಮಹಮ್ಮದ್ ಅಸ್ಗರ್ ಮುನ್ನಾ, ಅಬ್ದುಲ್ ಅಜೀಜ್, ರಯೀಸ್ ಅಹಮದ್, ಅಲ್ತಾಫ್ ಅಹಮದ್, ಜಬೀವುಲ್ಲಾ, ನವೀದ್ ಖಾನ್, ಮೌಲಾನ ಮಹಮದ್ ಇಸ್ಮಾಯಿಲ್, ಅಬ್ದುಲ್ ಖಾದರ್, ಅಯೂಬ್ ಖಾನ್, ಇತರೆ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.