ಚಾಮರಾಜನಗರ: ದೇಶಸೇವೆ ಮಾಡುವುದು ಒಂದು ಪುಣ್ಯದ ಕಾರ್ಯ, ಇಂತಹ ಪ್ರೇರಣೆ ತಮಗೆ ಒದಗಿಬಂದಿದ್ದೇ ರಾಜ್‌ಕುಮಾರ್ ಅವರ ಚಿತ್ರಗಳ ಪ್ರಭಾವದಿಂದ ಎಂದು ನಿವೃತ್ತಯೋಧ ಸಿ.ಆರ್.ಸಂತೋಷ್ ಕುಮಾರ್ ಹೇಳಿದರು.
ನಗರದ ಈಶ್ವರಿಸಂಗೀತ ಸಂಸ್ಥೆ ವತಿಯಿಂದ ಕನ್ನಡದ ವರನಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ. ಡಾ.ರಾಜ್ ಕುಮಾರ್ ಅವರ ೯೩ ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜತೆಗೆ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜ್‌ಕುಮಾರ್ ಅವರ ಒಂದೊಂದು ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮಸಂದೇಶನೀಡುವ ಅಂಶಗಳು ಅಡಕವಾಗಿವೆ. ಅವರ ಚಿತ್ರಗಳನ್ನು ವೀಕ್ಷಣೆ ಮಾಡುವ ಮೂಲಕ ೨೧ ವರ್ಷ ಕಾಲದೇಶಸೇವೆ ಮಾಡುವ ಸದವಕಾಶ ಒದಗಿಬಂತು. ರಾಜ್‌ಕುಮಾರ್ ಅವರಂತಹ ಮೇರುನಟನ ಜನ್ಮದಿನದಂದು ತಮ್ಮನ್ನು ಸನ್ಮಾನಿಸುತ್ತಿರುವುದು ನಮ್ಮ ಸೌಭಾಗ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಹಿರಿಯ ರಂಗಕರ್ಮಿ, ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ರಾಜ್ ಕುಮಾರ್ ಅವರು ನಟನೆಯ ಚಿತ್ರಗಳು ವರ್ಷಕ್ಕೆ ೬ರಿಂದ ೭ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆನಂತರ ರಾಜ್ ಕುಮಾರ್ ಅವರು ಜಿ.ವಿ.ಅಯ್ಯರ್, ನರಸಿಂಹಮೂರ್ತಿ ಅವರನ್ನೊಳಗೊಂಡ ತಂಡರಚಿಸಿಕೊಂಡು, ಎಚ್ಚಮನಾಯಕ, ಸಾಹುಕಾರ, ಬೇಡರಕಣ್ಣಪ್ಪ ನಾಟಕಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದರು.
ರಾಜ್‌ಅವರ ೧೦೦ ನೇ ಚಿತ್ರ ಭಾಗ್ಯದಬಾಗಿಲು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಕಲಾಸಾಂಸ್ಕೃತಿಕ ಕಲಾವಿದರ ಬಳಗದಿಂದ ಚಾಮರಾಜನಗರಕ್ಕೆ ರಾಜ್ ಅವರನ್ನು ಆಹ್ವಾನಿಸಿ ಅಭೂತಪೂರ್ವ ಸನ್ಮಾನ ಮಾಡಿದ್ದು, ಒಂದು ಅಧ್ಭುತ ಸಂಗತಿಯಾಗಿದೆ ಎಂದರು.
ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ರಾಜ್ ಅವರು ನಟಿಸಿರುವ ೨೦೫ ಚಿತ್ರಗಳಲ್ಲಿ ೧೦೫ ಚಿತ್ರಗಳು ಮನುಷ್ಯರನ್ನು ಪರಿವರ್ತನೆ ಮಾಡಿದ ಉದಾಹರಣೆಗಳಿವೆ.
ತಮ್ಮ ಹುಟ್ಟೂರು ಗಾಜನೂರಿಗೆ ರಾಜ್ ಅವರು ಬಂದಾಗ ಭೂಮಿತಾಯಿಯನ್ನು ನಮಸ್ಕರಿಸಿ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದು, ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಈಶ್ವರಿಸಂಗೀತಸಂಸ್ಥೆ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಸಂಸ್ಥೆ ವತಿಯಿಂದ ಕಳೆದ ೬ ವರ್ಷಗಳಿಂದ ನಗರದ ವಿವಿಧೆಡೆ ಪರಿಸರಸಂರಕ್ಷಣೆಗಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ರಾಜ್ ಅವರ ಜನ್ಮದಿನದಂದು ನಿವೃತ್ತ ಯೋಧರನ್ನು ಸನ್ಮಾನಿಸಲಾಗುತ್ತಿದ್ದು, ಇದು ಪುಣ್ಯದ ಕೆಲಸ ಎಂದರು.
ಇದೇವೇಳೆ ನಿವೃತ್ತ ಯೋಧ ಸಂತೋಷ್ ಹಾಗೂ ಅವರ ತಂದೆತಾಯಿ ರಂಗರಾಮು, ಪದ್ಮಿನಿ ಅವರನ್ನು ಸನ್ಮಾನಿಸಲಾಯಿತು.
ಜಯಲಕ್ಷ್ಮೀ ವೆಂಕಟೇಶ್, ಕಮಲ್ ರಾಜ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಹಾಜರಿದ್ದರು.
