ಗುಂಡ್ಲುಪೇಟೆ: ಗೋವುಗಳ ಸಂರಕ್ಷಣೆ ಬಿಜೆಪಿ ಪಕ್ಷದ ಸಂಕಲ್ಪವಾಗಿದೆ. ಆದ್ದರಿಂದ ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.

ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಗುರುರಾಯರ ಮೃತ್ತಿಕಾ ಬೃಂದಾವನ ಟ್ರಸ್ಟ್ ವತಿಯಿಂದ ರಾಯರ ಮಠದ ಆವರಣದಲ್ಲಿ ನೂತನವಾಗಿ ತೆರೆದಿರುವ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡ ಗೋವುಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಪ್ರಸಕ್ತ ಸಾಲಿನಲ್ಲಿ ಸರ್ಕಾರ ಜಿಲ್ಲೆಗೆ ಒಂದರಂತೆ ಗೋಶಾಲೆ ತರೆಯಲು ಅನುಮತಿ ನೀಡಿದೆ. ಇದರ ಅನ್ವಯ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ವತಿಯಿಂದ ತಾಲೂಕಿನ ಬರಗಿ ಗ್ರಾಮದಲ್ಲಿರುವ ಫಾರಂನಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ. ಶೀಘ್ರದಲ್ಲೆ ಗೋಶಾಲೆ ತೆರೆಯಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ನಾಗೇಶ್, ತಹಸೀಲ್ದಾರ್ ರವಿಶಂಕರ್, ರಾಯರ ಮಠದ ಆಡಳಿತ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಚಂದ್ರಶೇಖರ್, ಹಂಗಳ ನಂದೀಶ್ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್.ಹಂಗಳ