ಮೈಸೂರು: ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ವರುಣ ತಂಪನ್ನೀಡಿದ್ದಾನೆ. ಶನಿವಾರ ಮುಂಜಾನೆಯಿಂದಲೇ ತುಂತುರಾಗಿ ಆರಂಭವಾದ ಮಳೆ ಕ್ರಮೇಣ ಬಿರುಸು ಪಡೆದಿದೆ. ಕಳೆದ ಕೆಲವು ದಿನಗಳಿಂದ ಭಾರೀ ಸೆಖೆಯಿತ್ತಾದರೂ ಮಳೆಯೊಂದಿಗೆ ಇಳೆ ತಂಪಾಗಿದೆ.
ಈ ಬಾರಿಯ ಬೇಸಿಗೆಯಲ್ಲಿ ಧಾರಾಕಾರ ಮಳೆ ಸುರಿದಿರಲಿಲ್ಲ. ಸಾಧಾರಣ ಮಳೆಯಷ್ಟೆ ಸುರಿದಿತ್ತು. ಹೀಗಾಗಿ ಧೂಳಿನಿಂದ ನಲುಗಿದ್ದ ನಗರವನ್ನು ಇದೀಗ ಸುರಿದ ಮಳೆ ತೊಳೆದು ನೆಮ್ಮದಿಯಿಂದ ಓಡಾಡುವಂತೆ ಮಾಡಿದೆ. ಜತೆಗೆ ಬಿಸಿಲಿನ ತಾಪಕ್ಕೆ ಸಿಕ್ಕಿ ನೀರಿನ ಆಸರೆಗಾಗಿ ಕಾಯುತ್ತಿದ್ದ ಗಿಡಮರಗಳು ನೆಮ್ಮದಿಯುಸಿರು ಬಿಡುವಂತಾಗಿದೆ.
ಕೊರೋನಾ ಲಾಕ್ ಡೌನ್ ಕಾರಣ ಜನ ಮನೆಯಲ್ಲಿಯೇ ಇರುವುದರಿಂದ ಮಳೆಯಿಂದ ಜನ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ನಗರದಲ್ಲಿ ಹನಿಹನಿಯಾಗಿ ಆರಂಭಗೊಂಡ ತುಂತುರು ಮಳೆ ಒಂದಷ್ಟು ರಭಸವನ್ನು ಹೆಚ್ಚಿಸಿದೆ. ಇದು ತೌಕ್ತೆ ಚಂಡಮಾರುತದ ಎಫೆಕ್ಟ್ ಆಗಿದ್ದರೂ ಕೂಡ ಮಳೆ ಸುರಿದಿರುವುದು ನೆಮ್ಮದಿ ತಂದಿದೆ.
ಒಮ್ಮೆ ಜೋರಾಗಿ ಸುರಿಯುತ್ತಾ ಮತ್ತೆ ವೇಗಕ್ಕೆ ಕಡಿವಾಣ ಹಾಕಿ ಹನಿಹನಿಯಾಗಿ ಬೀಳುತ್ತಾ ಆಟವಾಡುತ್ತಿರುವ ವರುಣ ಮನೆಯಲ್ಲಿಯೇ ಕುಳಿತು ಹೊರಗೆ ಇಣುಕಿ ನೋಡುವ ಮಂದಿಗೆ ಒಂದಷ್ಟು ಖುಷಿ ನೀಡಿದರೆ ಮನೆಯಿಂದ ಹೊರಗೆ ಇರುವ ಮಂದಿಗೆ ಕಿರಿಕಿರಿಯಾಗಿಸಿದೆ. ಲಾಕ್ ಡೌನ್ ಇದ್ದರೂ ಕೆಲವರು ಎಲ್ಲೆಂದರಲ್ಲಿ ಸುಖಾ ಸುಮ್ಮನೆ ಓಡಾಡುವವರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟು ದಿನ ಬಿಸಿಲ ಝಳದಲ್ಲಿ ಹಗಲು ಹೊತ್ತನ್ನು ಕಳೆಯುತ್ತಿದ್ದವರು ಮೋಡ ಮುಸುಕಿನ ಜಿಟಿಜಿಟಿ ಮಳೆಗೆ ಹೊತ್ತು ನೆತ್ತಿಗೇರಿದರೂ ಇನ್ನೂ ಕೂಡ ಮುಂಜಾನೆಯೋ ಎಂಬ ಮನಸ್ಥಿತಿಯಲ್ಲಿ ದಿನವನ್ನು ನೂಕುತ್ತಿದ್ದಾರೆ.
ಒಂದು ವೇಳೆ ಮಳೆ ಇನ್ನಷ್ಟು ರಭಸದಿಂದ ಸುರಿದರೆ ಜನಜೀವನ ಅಸ್ತವ್ಯಸ್ತವಾಗುವುದಂತು ಖಚಿತ. ಆದರೆ ಗಾಳಿಯಿಲ್ಲದೆ ಬರೀ ಮಳೆ ಮಾತ್ರ ಸುರಿಯುತ್ತಿರುವ ಕಾರಣ ಮರದ ಕೊಂಬೆಗಳು ಬೀಳುವುದಾಗಲೀ ಇನ್ಯಾವುದೇ ಅನಾಹುತ ಸಂಭವಿಸಲಾರದು ಎಂಬುದು ಕೆಲವರ ಅನುಭವದ ಮಾತಾಗಿದೆ.