ಬೆಂಗಳೂರು: ಕೊರೋನಾದಿಂದ ಕಂಗಾಲು ಆಗಿರುವ ವೇಳೆಯಲ್ಲಿಯೇ ಗಾಯದ ಮೇಲೆ ಬರೆ ಎಳೆದಂತೆ ತೌಕ್ತೆ ಚಂಡ ಮಾರುತ ಅಪ್ಪಳಿಸುತ್ತಿದ್ದು, ಅದರ ಪರಿಣಾಮ ರಾಜ್ಯದ ಮೇಲೆ ಬೀರಿರುವುದು ಕಂಡು ಬಂದಿದೆ.
ಈಗಾಗಲೇ ಕರಾವಳಿ ಮತ್ತು ಮಲೆನಾಡುಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅರಮನೆ ನಗರಿಯಲ್ಲಿ ಮುಂಜಾನೆಯಿಂದಲೇ ಮೋಡಕವಿದ ವಾತಾವರಣದೊಂದಿಗೆ ತುಂತುರು ಮಳೆ ಸುರಿಯುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು, ಗಂಟೆಗೆ 150ರಿಂದ 160 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿ ಅದು 175 ಕಿಲೋ ಮೀಟರ್ ವೇಗವನ್ನು ಕೂಡ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಇದರ ತೀವ್ರತೆ ರಾಜ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ ಮಲೆನಾಡು ಪ್ರದೇಶವಾದ ಕೊಡಗಿನಲ್ಲಿಯೂ ಮಳೆಯಾಗುತ್ತಿದೆ. ಒಂದೆಡೆ ಕೊರೋನಾ ಎರಡನೇ ಅಲೆ ಇನ್ನೊಂದೆಡೆ ಚಂಡಮಾರುತ ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಿದ್ದತೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಪರಾಮರ್ಶೆ ನಡೆಸಲಿದ್ದು ಸರ್ಕಾರದ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.