ಜೀವನದಲ್ಲಿ ಬಂದೊದಗಿದ ವೇದನೆಯನ್ನು ಮೆಟ್ಟಿಲಾಗಿಸಿಕೊಂಡು ಸಾಧನೆಯ ಶಿಖರದ ಹಾದಿಯಲ್ಲಿ ಮೇಲೇರುತ್ತ ಮುನ್ನಡೆಯುತ್ತಿರುವ ಸಾಧಕಿಯೊಬ್ಬರ ಸಾಧನೆಯ ಯಶೋಗಾಥೆ ಇಲ್ಲಿದೆ. ಆ ಸಾಧಕಿ ಬೇರೆ ಯಾರೂ ಅಲ್ಲ. ಅಪ್ಪಟ ಗ್ರಾಮೀಣ ಪ್ರದೇಶದ ಪ್ರತಿಭಾವಂತೆ ಗೀತಾ ರೆಡ್ಡಿ.
ಗೀತಾ ರೆಡ್ಡಿಯವರು ಲೋಕಪ್ಪ ಪಾಟೀಲ, ಸರೋಜಮ್ಮ ದಂಪತಿ ಸುಪುತ್ರಿಯಾಗಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕು ಹೊಸ ವೀರಾಪುರ ಗ್ರಾಮದಲ್ಲಿ ಜನಿಸಿದರು.
ಇವರಿಗೆ ಒಬ್ಬ ಅಣ್ಣ ಮತ್ತು ಒಬ್ಬ ತಮ್ಮನಿದ್ದಾರೆ. ಇವರು ಬಿ.ಎ., ಕನ್ನಡ ಎಂ.ಎ. ಪದವೀಧರೆ. ಜತೆಗೆ ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್‍ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ತಂದೆ ವಕೀಲವೃತ್ತಿಯ ಸರ್ಕಾರಿ ಕೆಲಸ ಸಿಕ್ಕಿದ್ದರೂ ಆಸೆಪಡದೆ ಕೃಷಿಕಡೆ ಒಲವು ಬೆಳೆಸಿಕೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಹಳ್ಳಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದರು. ಇದರಿಂದ ಗೀತಾ ರೆಡ್ಡಿಯವರಿಗೆ ಓದುವ ಗೀಳು ಚಿಕ್ಕಂದಿನಿಂದಲೇ ಉಂಟಾಯಿತು.
ಪ್ರಾಥಮಿಕ ಶಿಕ್ಷಣ 1 ರಿಂದ 5ನೇ ತರಗತಿಯವರೆಗೆ ತಂದೆಯ ಮಾರ್ಗದರ್ಶನದಲಿ ಪೂರೈಸಿದ ಇವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಮ್ಮ ಬಾಲ್ಯದಿಂದಲೇ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದರು. ಪಾಠ, ಆಟ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ಮುಂದಿದ್ದರು. 6 ಮತ್ತು 7ನೇ ತರಗತಿ ವಿದ್ಯಾಭ್ಯಾಸವನ್ನು ಚಿಕ್ಕಮ್ಮನ ಊರಾದ ನಂದಿಗಾವಿಯಲ್ಲಿ ಮಾಡಿದರು. ನಂದಿಗಾವಿಯಲ್ಲಿ ಪ್ರೌಢಶಾಲೆ ಇರಲಿಲ್ಲ. ಹೀಗಾಗಿ ಹಳ್ಳಿಗೆ ವಾಪಸಾದರು. ಆಗಿನ ಕಾಲದಲ್ಲಿ ಕಾಲದಲ್ಲಿ ಹೆಣ್ಣುಮಕ್ಕಳನ್ನು ಹಾಸ್ಟೆಲ್‍ನಲ್ಲಿ ಬಿಡುತ್ತಿರಲಿಲ್ಲ. ಅಪ್ಪನ ಗ್ರಂಥಾಲಯದಲ್ಲಿದ್ದ ಕಿತ್ತೂರು ರಾಣಿಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇತ್ಯಾದಿ ಸಾಧಕಿಯರ ಪುಸ್ತಕಗಳನ್ನು ಓದಿ ಅವರಂತೆಯೇ ಆಗಬೇಕೆಂಬ ಕನಸು ಕಂಡರು. 8ನೇ ತರಗತಿಯನ್ನು ಹಿರೇಕೆರೂರಿನಲ್ಲಿ ಮುಗಿಸಿದ ಇವರು ಮುಂದಿನ ವಿದ್ಯಾಭ್ಯಾಸವನ್ನು ಸರ್ವಜ್ಞ ಕವಿಯ ಜನ್ಮಸ್ಥಳವಾದ ಮಾಸೂರಿನಲ್ಲಿ ಮುಗಿಸಿದರು. ಈ ಸರ್ವಜ್ಞನ ಮಾಸೂರು ಇವರ ಊರಿನಿಂದ 3 ಕಿ.ಮೀ. ದೂರವಿದ್ದಾಗ್ಯೂ ಕೂಡ ಓದುವ ಹಠ, ಹಂಬಲ, ಗುರಿಗಳನ್ನು ಇಟ್ಟುಕೊಂಡಿದ್ದ ಇವರಿಗೆ ದೂರವೆನಿಸಲಿಲ್ಲ. ದಿನವೂ ತನ್ನೂರಿನ ಕೆಲವು ಗೆಳತಿಯರೊಂದಿಗೆ ಕಾಲ್ನಡಿಯಲ್ಲೇ ಪಿಯುಸಿ ವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದರು.
ಪಿಯುಸಿ ಮುಗಿಸಿದ ನಂತರ ಗೀತಾ ರೆಡ್ಡಿಯವರಿಗೆ ಉನ್ನತ ವ್ಯಾಸಂಗಕ್ಕೆ ಹೋಗುವ ಉತ್ಕಟ ಆಕಾಂಕ್ಷೆ ಇದ್ದರೂ ಮನೆಯಲ್ಲಿ ಪ್ರೋತ್ಸಾಹ ಸಿಗಲಿಲ್ಲ. ತಂದೆ-ತಾಯಿಗಳನ್ನೇ ದೇವರೆಂದುಕೊಂಡ ಸುಸಂಸ್ಕøತ ನಡವಳಿಕೆಯ ಸಂಸ್ಕಾರವಂತೆಯಾದ ಈಕೆ ತಂದೆ-ತಾಯಿಗಳ ಮಾತಿಗೆ ಎದುರಾಡದೆ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲಾಗದೆ ಅಸಹಾಯಕಿಯಾಗಿ ತಂದೆ-ತಾಯಿ ಆಶಯದಂತೆ ತಮ್ಮ ಸೋದರಮಾವನನ್ನೇ ವಿವಾಹವಾಗಿ ಗಂಡನ ಊರಾದ ದಾವಣಗೆರೆಗೆ ಪಯಣ ಬೆಳೆಸಿದರು.
ಗಂಡನ ಮನೆ ತುಂಬು ಅವಿಭಕ್ತ ಕುಟುಂಬ. ಮದುವೆಯಾದ ಮರು ವರ್ಷದಲ್ಲೇ ಗಂಡುಮಗುವಿನ ತಾಯಿಯಾದ ಗೀತಾರೆಡ್ಡಿಯವರು ಗಂಡನ ಮತ್ತು ಮನೆಯ ಇತರರ ಪ್ರೋತ್ಸಾಹ, ಉತ್ತೇಜನದಿಂದ ಬಿ.ಎ. ಹಾಗೂ ಕನ್ನಡ ಎಂ.ಎ. ಪದವಿಗಳನ್ನು ಮುಗಿಸಿದರು. ಬದುಕಿನ ಯಾವ ಸಮಯವೂ ಅಪವ್ಯಯವಾಗದ ಹಾಗೆ ಡ್ರಾಯಿಂಗ್, ಪೇಂಟಿಂಗ್, ಇಂಗ್ಲಿಷ್ ಕ್ಲಾಸ್, ಡ್ರೈವಿಂಗ್ ಇತ್ಯಾದಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಗೀತಾ ರೆಡ್ಡಿಯವರ ಪುತ್ರ ಆಶಿಕ್ ತುಂಬಾ ತುಂಟ, ಜಾಣ. ಮಗನ ದೈವಭಕ್ತಿಯ ನಡೆ-ನುಡಿಗಳಿಂದ ಗೀತಾ ರೆಡ್ಡಿಯವರು ಸಂತೋಷಪಡುತ್ತಿದ್ದರು. ಬದುಕು ಆನಂದ ಸಾಗರದಲ್ಲಿರುವಾಗಲೇ ಕಾಲನಿಗೆ ಇದನ್ನು ಸಹಿಸಲಾಗಲಿಲ್ಲವೋ ಎಂಬಂತೆ ಪುತ್ರ ಆಶಿಕ್ 11ನೇ ವಯಸ್ಸಿಗೇ ಡೆಂಗ್ಯೂ ಜ್ವರದಿಂದ ಅನಿರೀಕ್ಷಿತವಾಗಿ ಮೃತಪಟ್ಟನು. ಏಕೈಕ ಪುತ್ರನ ನಿಧನದಿಂದ ಮಾನಸಿಕವಾಗಿ ಜರ್ಜರಿತರಾದ ಗೀತಾ ರೆಡ್ಡಿಯವರು ವಿಪರೀತ ಖಿನ್ನತೆಗೊಳಗಾಗಿ ಮುಂಬಯಿಯ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮತ್ತೆ ಚೇತರಿಸಿಕೊಂಡರು.
ಮಗ ಮೃತಪಟ್ಟ ಒಂದು ವರ್ಷದೊಳಗೆ ದೇವರ ದಯೆ ಎಂಬಂತೆ ಮಗಳು ಹುಟ್ಟಿದಳು. ಮಗಳ ಆಟ-ಪಾಠಗಳನ್ನು ಕಂಡು ಮಗನ ಅಗಲಿಕೆಯ ವಿಪರೀತ ನೋವನ್ನು ಮರೆಯಲು ಗೀತಾರೆಡ್ಡಿಯವರು ಪ್ರಯತ್ನಪಟ್ಟರೂ ಅದು ಕಷ್ಟಸಾಧ್ಯವಾಗಿತ್ತು.
ಮಗನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು. ಅದಕ್ಕಾಗಿಯೇ ತಾನು ಏನಾದರೂ ಮಾಡಬೇಕು. ಆ ಮೂಲಕ ಮಗನನ್ನು ತನ್ನ ನೆನಪಿನಲ್ಲಿ ಮತ್ತು ಲೋಕದ ನೆನಪಿನಲ್ಲಿ ಸದಾ ಸರ್ವದಾ ಜೀವಂತವಾಗಿ ಇಟ್ಟುಕೊಳ್ಳಬೇಕು ಎಂಬ ತೀವ್ರ ಹಂಬಲದಿಂದ ತಮ್ಮ ಸಹೋದರ ಹನುಮಂತರೆಡ್ಡಿ ತಿಳಿಸಿದಂತೆ ಅಂಕಗಣಿತಕ್ಕೆ ಸಂಬಂಧಿಸಿದ ಕ್ಯಾಲ್ಕುಲೇಟರ್‍ಗಿಂತಲೂ ಫಾಸ್ಟ್ ಆಗಿ ಲೆಕ್ಕಗಳನ್ನು ಮಾಡಬಲ್ಲ, ವಿದ್ಯಾರ್ಥಿಗಳನ್ನು ತಯಾರು ಮಾಡಬಲ್ಲ "ಆಶಿಕ್ ಬ್ರೈನ್ ಡೆವಲಪ್‍ಮೆಂಟ್ ಸೆಂಟರ್" ಎಂಬ ಸಂಸ್ಥೆಯನ್ನು 2004ರಲ್ಲಿ ರಾಣೆಬೆನ್ನೂರಿನಲ್ಲಿ ಪ್ರಾರಂಭಿಸಿದರು. ಈ ಸಂಸ್ಥೆಯ ಶಾಖೆಯಾಗಿ ದಿನೇಶ್ ವಿಕ್ಟರ್, ಹೆಚ್.ಎನ್. ನರೇಂದ್ರ, ಪತಿ ವಾಸುದೇವ ರೆಡ್ಡಿಯವರ ಸಹಕಾರದಿಂದ "ಅಬ್ಯಾಕಸ್ ಶಿಕ್ಷಣ ಸಂಸ್ಥೆ"ಯನ್ನು ಅದೇ ವರ್ಷ ಪ್ರಾರಂಭಿಸಿದರು.
ಆಗ ರಾಣೆಬೆನ್ನೂರಿನ ಜನಕ್ಕೆ ಅಬ್ಯಾಕಸ್ ಎನ್ನುವ ಹೆಸರೇ ಗೊತ್ತಿರಲಿಲ್ಲ. ಶಾಲೆಗೆ ಮಕ್ಕಳು ಸೇರುವುದೇ ಕಷ್ಟವಾಯಿತು. ಕೊನೆಗೆ ಗೀತಾ ರೆಡ್ಡಿಯವರು ಅಬ್ಯಾಕಸ್ ಬಗ್ಗೆ ವಿವರಿಸಿದಾಗ 15 ಮಕ್ಕಳ ಅಡ್ಮಿಶನ್ ಆಯಿತು. ಮಕ್ಕಳಿಗೆ ತಾಯ್ತನದಿಂದ ಕಲಿಸಿಕೊಡುತ್ತ ಶಾಲಾವಿಕಾಸಕ್ಕಾಗಿ ಪಣತೊಟ್ಟು ನಿಂತರು.
2005ರಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಯಲ್ಲಿ 3000 ಮಕ್ಕಳು ಭಾಗವಹಿಸಿದ್ದರು. ಜಾವಗಲ್ ಶ್ರೀನಾಥ್ ಅತಿಥಿಗಳಾಗಿ ಆಗಮಿಸಿದ್ದರು. ಗೀತಾರೆಡ್ಡಿಯವರ ಸಂಸ್ಥೆಯ ಮಕ್ಕಳು ಗೆದ್ದು ಬಂದರು. ಅಂದಿನಿಂದ ಗೀತಾ ರೆಡ್ಡಿಯವರಿಗೆ ಕೀರ್ತಿಯ ದಿನಗಳು ಆರಂಭವಾದವು. ಅದರಿಂದ ಮಕ್ಕಳ ಸಂಖ್ಯೆಯೂ ಜಾಸ್ತಿಯಾಯಿತು. ಆಗ ಶಿಕ್ಷಕಿಯರನ್ನು ಬೆಂಗಳೂರಿಗೆ ತರಬೇತಿಗಾಗಿ ಕಳುಹಿಸಿ ತಮ್ಮ ಶಾಲೆಗೆ ಗೀತಾ ರೆಡ್ಡಿಯವರು ನೇಮಿಸಿಕೊಂಡರು.
ಗೀತಾ ರೆಡ್ಡಿಯವರ ಶಿಕ್ಷಣ ಸಂಸ್ಥೆಯಲ್ಲಿ ಈಗ 400 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 10 ಜನ ಹೆಣ್ಣುಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಶಿಕ್ಷಕಿಯರ ಕೆಲಸಕೊಟ್ಟ ಕೀರ್ತಿ ಗೀತಾ ರೆಡ್ಡಿಯವರದು.
ಗೀತಾ ರೆಡ್ಡಿಯವರ ಇದುವರೆಗಿನ ಸಾಧನೆಗಳು :
ಭಾರತದಲ್ಲಿ 750 ಅಬ್ಯಾಕಸ್ ಕಲಿಕಾ ಕೇಂದ್ರಗಳಿವೆ. ಅದರಲ್ಲಿ 35 ಕಲಿಕಾ ಕೇಂದ್ರಗಳನ್ನು ಗುರುತಿಸಿ ಅವರಿಗೆ ಟೈಟನ್ ಅವಾರ್ಡ್ ನೀಡುತ್ತಾರೆ. 2011 ರಿಂದ ಸತತವಾಗಿ 8 ವರ್ಷಗಳಿಂದ ಈ ಅವಾರ್ಡ್‍ಗೆ ಗೀತಾ ರೆಡ್ಡಿಯವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

2007ರಲ್ಲಿ ಶ್ರೀಲಂಕಾಕ್ಕೆ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿಯೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2013ರಲ್ಲಿ ಮಲೇಷಿಯಾಕ್ಕೆ ಹೋಗಿ ಪ್ರಶಸ್ತಿ ಗಳಿಸಿದ ಹಿರಿಮೆ, ಗರಿಮೆ ಇವರದು.
ಇತರ ಸಂಸ್ಥೆಯಲ್ಲಿ ಓದಿದ ಅನೇಕ ಮಕ್ಕಳು ಪ್ರವೇಶ ಪರೀಕ್ಷೆಗಳಲ್ಲಿ ರ್ಯಾಂಕ್‍ಗಳನ್ನು ಗಳಿಸಿ ಉಚಿತವಾಗಿ ಮೆಡಿಕಲ್ ಸೀಟ್ ಗಳಿಸಿದ್ದಾರೆ. ಮತ್ತೆ ಹಲವು ಮಕ್ಕಳು ಚಾರ್ಟರ್ಡ್ ಅಕೌಂಟೆಂಟ್ ಆಗಿ ನೇಮಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅನೇಕ ಸಾಧಕ ಮಕ್ಕಳು ತಮ್ಮ ಬದುಕಿನ ಪ್ರಗತಿಗೆ, ವಿಕಾಸಕ್ಕೆ ಮತ್ತು ಜೀವನಕ್ಕೊಂದು ಉತ್ತಮ ಕೆಲಸ ಪಡೆಯಲು ಈ ಸಂಸ್ಥೆಯೇ ಕಾರಣವೆಂದು ಹೆಮ್ಮೆಯಿಂದ ಹೇಳುತ್ತಾರೆ. ಒಬ್ಬ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಹಳ್ಳಿಗಾಡಿನ ಹುಡುಗಿ ಬಾಲ್ಯದಲ್ಲಿ ತನ್ನ ವಿದ್ಯಾಭ್ಯಾಸ ಮೊಟಕಾಗಿದ್ದರೂ ಮದುವೆಯಾದ ನಂತರದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಲೇ ಸದ್ಗøಹಿಣಿಯಾಗಿ ಮನಗೆದ್ದು ಮಾರನ್ನೂ ಗೆದ್ದಿದ್ದಾರೆ. ತಮ್ಮ ಹಠ ಮತ್ತು ಛಲದಿಂದ ಕಳೆದುಕೊಂಡ ಮಗನ ನೆನಪಿನಲ್ಲಿ ಶಾಲೆಯೊಂದನ್ನು ಕಟ್ಟಿ ಅಲ್ಲಿಯ ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮ ಮಗನನ್ನು ಕಾಣುತ್ತ, ವಿದ್ಯಾರ್ಥಿಗಳ ಪ್ರಗತಿಗೆ ಕಾರಣರಾಗಿ ಸಂಭ್ರಮಿಸುತ್ತ ವೇದನೆಯಲ್ಲೂ ಸಾಧನೆಯನ್ನು ಮಾಡಬಹುದು, ಸಾಧಿಸುವ ಛಲವೊಂದಿದ್ದರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಅಂತಹದ್ದೊಂದು ಮಾದರಿಯ ಶಾಲೆಯನ್ನು ಕಟ್ಟಿ ಆದರ್ಶ ಗೃಹಿಣಿಯಾಗಿ, ಶಿಕ್ಷಕಿಯಾಗಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿಯಾಗಿ, ಸಂಸಾರಸ್ಥೆಯಾದ ನಂತರದಲ್ಲಿ ಬಿ.ಎ., ಎಂ.ಎ., ಪದವಿಗಳನ್ನು ಪಡೆದು ವಿಶೇಷವಾಗಿ ಮಹಿಳೆಯರಿಗೆ ಮಾದರಿಯಾಗಿರುವ ಇವರು ನಿಜಕ್ಕೂ ಅಭಿನಂದನೀಯರು ಹಾಗೂ ವಂದನೀಯರು.
ಗೀತಾ ರೆಡ್ಡಿಯವರಿಗೆ ಅವರ ಒಟ್ಟಾರೆ ಸಾಧನೆಯನ್ನು ಗುರುತಿಸಿ ಪ್ರೈಡ್ ಆಫ್ ಉತ್ತರ ಕರ್ನಾಟಕ ಪ್ರಶಸ್ತಿಯನ್ನು ಕರ್ನಾಟಕದ ಎಸ್‍ಐಪಿ ಅಕಾಡೆಮಿಯವರು ನೀಡಿದ್ದಾರೆ.