ಮೈಸೂರು ತಾಲೂಕಿನ ‘ಪುಟ್ಟೇಗೌಡನ ಹುಂಡಿ ಹಾಲು ಉತ್ಪಾದನಾ ಸಂಘ ನಿ.’-ಯ ನೂತನ ಹಾಲು ಶೀತಲೀಕರಣ ಕೇಂದ್ರದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಜಿ. ಡಿ ಹರೀಶ್ ಗೌಡರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲು ಉತ್ಪಾದನಾ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಉತ್ಪಾದನಾ ಸಹಕಾರ ಸಂಘಗಳು ನಮ್ಮ ರೈತರ ಜೀವನಾಡಿ. ಸುಮಾರು 7 ತಿಂಗಳಿಂದ ಇಡೀ ವಿಶ್ವವನ್ನೇ ಆವರಿಸಿಕೊಂಡ ಕೊರೋನಾ ಮಹಾಮಾರಿಯಿಂದ ಎಲ್ಲಾ ಕೆಲಸಗಳು ಸ್ಥಗಿತವಾಗಿ ಹೋಗಿದ್ದವು. ಆದರೆ ಈ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡಿರುವಂತಹ ವರ್ಗದವರೆಂದರೆ ಅದು ನಮ್ಮ ರೈತರು ಹಾಗೂ ಹೈನುಗಾರಿಕೆಯನ್ನು ಬೆಳೆಸುತ್ತಿರುವ ಮಹಿಳೆಯರು ಎಂದರು.
ಮಾತು ಮುಂದುವರೆಸುತ್ತಾ, ‘ಲಾಕ್ ಡೌನ್ ತೆರವುಗೊಂಡ ನಂತರ ಯಾವುದೇ ಅದೆಷ್ಟೋ ಉದ್ಯಮಿಗಳಿಗೆ ಮತ್ತು ಕಾರ್ಖಾನೆ ಮಾಲೀಕರು ಉದ್ದಿಮೆಗೆ ಆದ ನಷ್ಟಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ವೇಳೆ ವರ್ಷದ 365 ದಿನವೂ ಯಾವುದೇ ಸಮಸ್ಯೆಯಿಲ್ಲದೆ ಹಳ್ಳಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಉದ್ಯಮವೆಂದರೆ ಅದು ಹೈನುಗಾರಿಕೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಯ ಹೆಂಗಸರು ತಾವು ಯಾರಿಗೂ ಕಡಿಮೆಯಿಲ್ಲದಂತೆ ಹೈನುಗಾರಿಕೆಯನ್ನು ಮಾಡಿ, ಮನೆಯನ್ನು ನಡೆಸುತ್ತಾ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುತ್ತಿದ್ದಾರೆ’ ಎಂದರು.
ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇಂದು ಅದೆಷ್ಟೊ ರೈತರು ಮತ್ತು ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಹಲವಾರು ಒಕ್ಕೂಟಗಳು ರೈತರಿಂದ ಹಾಲನ್ನು ಖರೀದಿಸಿ ಅದರ ಸಂಪೂರ್ಣ ಮಾರುಕಟ್ಟೆಯ ಜವಾಬ್ದಾರಿಯನ್ನು ತೆಗೆದುಕೊಂಡು, ಪ್ರತೀವಾರ ರೈತರಿಗೆ ಹಣವನ್ನು ತಪ್ಪದೇ ಪಾವತಿಸುತ್ತಿದ್ದದ್ದು ಅತ್ಯಂತ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಹಾಲು ಉತ್ಪಾದಕರಿಗೆ ಕಿವಿಮಾತು ಹೇಳಿದ ಅವರು, ಹಾಲಿನ ಗುಣಮಟ್ಟ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಿ ಎಂದರು. ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯಬೇಕೆಂದರೆ ಅದಕ್ಕೆ ಮೂಲ ಕಾರಣಕರ್ತರು ಶೇರುದಾರರು, ಉತ್ಪಾದಕರು ಮತ್ತು ಆಡಳಿತ ಮಂಡಳಿ. ಆಡಳಿತ ಮಂಡಳಿಯ ಪ್ರಾಮಾಣಿಕ ಪರಿಶ್ರಮವಿದ್ದರೆ ಅದು ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಒಕ್ಕೂಟದವರಿಗೆ ಹೆಚ್ಚು ಅಭಿವೃದ್ಧಿಯನ್ನು ತಂದುಕೊಡುತ್ತದೆ. ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚು ಲಾಭವಾಗುತ್ತದೆ. ಇಂದು ಕಟ್ಟಿರುವ ಕಟ್ಟಡ ನಮ್ಮ ಹಾಲು ಉತ್ಪಾದಕರಿಗೆ ಸೇರಿರುವಂತಹ ಆಸ್ತಿ ಎಂದರು.
ಅಧ್ಯಕ್ಷರಾದ ಮಹದೇವಪ್ಪನವರ ಕೋರಿಕೆಯಂತೆ ಹೊಸ ಸದಸ್ಯರಿಗೆ ಸಾಲವನ್ನು ಕೊಡುವ ವಿಚಾರವಾಗಿ ಬ್ಯಾಂಕ್ ನಲ್ಲಿ ಕೂತು ಚರ್ಚಿಸಿ 50 ಲಕ್ಷ , ಬಡ್ಡಿರಹಿತ ಸಾಲವನ್ನು ನೀಡಿದ್ದೇವೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ದಿನಗಳಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ 75 ಕೋಟಿಯನ್ನ ಬಡ್ಡಿರಹಿತವಾಗಿ 40 ಸಾವಿರ ಗುಂಪುಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಯತೀಂದ್ರ ಸಿದ್ದರಾಮಯ್ಯನವರು, ಸಂಘದ ಅಧ್ಯಕ್ಷರಾದ ಮಹಾದೇವಪ್ಪನವರು, ಜಿಲ್ಲಾ ಪಂಚಾಯತ್ ಸದಸ್ಯರಾದ ಭಾಗ್ಯಮ್ಮ, ತಾಲೂಕು ಪಂಚಾಯಿತಿ ಸದಸ್ಯರಾದ ಮುದ್ರಾಮೆಗೌಡ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

By admin