
ಚಾಮರಾಜನಗರ: ನಗರದ ರೋಟರಿ ಭವನದಲ್ಲಿ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯ ಇಬ್ಬರು ನಿವೃತ್ತ ಯೋಧರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಜಿಲ್ಲೆಯ ವೀರಭದ್ರಯ್ಯ ಹಾಗೂ ವೀರಪ್ಪ ಇಬ್ಬರು ನಿವೃತ್ತ ಯೋಧರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯಾ ವಿವಿಯ ದಾನೇಶ್ವರಿಜಿ ದೇಶದ ಗಡಿ ಭಾಗದಲ್ಲಿ ಸೇವೆ ಮಾಡಿ ರಕ್ಷಣೆಯಲ್ಲಿ ತೊಡಗಿಸಿಕೊಂಡ ಇಬ್ಬರು ಯೋಧರನ್ನು ಇಂದು ಸನ್ಮಾಸಿರುವುದು ಅರ್ಥಪೂರ್ಣವಾಗಿದೆ. ಇಂದು ನಾವೆಲ್ಲರೂ ಶಾಂತಿ, ನೆಮ್ಮದಿಯಿಂದ ಇರಲು ಯೋಧರು ಗಡಿಯಲ್ಲಿ ಪ್ರಾಣದ ಹಂಗು ತೊರೆದು ಸುಡಿಯುತ್ತಿರುವುದೇ ಕಾರಣವಾಗಿದ್ದು ಯೋಧರನ್ನು ನಾವು ಪ್ರತಿ ದಿನ ಸ್ಮರಿಸಬೇಕಿದೆ ಎಂದರು.
ಮನುಷ್ಯ ಪ್ರಾಣಿ ಪ್ರಪಂಚದಲ್ಲಿ ಬುದ್ದಿವಂತ ಜೀವಿಯಾಗಿದ್ದು ಪರೋಪಕಾರಕ್ಕಾಗಿ ಈ ಜೀವನವನ್ನು ಮುಡಿಪಾಗಿಟ್ಟು ಪ್ರಾಣಿ,ಪಕ್ಷಿಗಳಿಗೂ ಒಳಿತು ಮಾಡುವ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ದೊರೆತ ಸಮಯವನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಕಾರ್ಯಗಳಿಗಾಗಿಯೇ ಸಮಯ ಮೀಸಲಿರಿಸೋನ ಎಂದು ಸಲಹೆ ನೀಡಿದರು.
ಜಿ.ಪಂ ಲೆಕ್ಕಾಧಿಕಾರಿ ಎಚ್.ಎಸ್.ಗಂಗಾಧರ್ ಮಾತನಾಡಿ ನಟ ಪುನೀತ್ ಅವರ ಸಮಾಜಮುಖಿ ಕಾರ್ಯವು ಎಲೆಮರೆಕಾಯಿಯಂತೆ ಇದ್ದಿತು ಅವರ ಮರಣ ನಂತರ ಈಗ ಅವರ ಸಮಾಜ ಸೇವೆ ಬೆಳಕಿಗೆ ಬಂದಿದೆ.ಮನುಷ್ಯ ಬದುಕಿರುಚಚಷ್ಟು ದಿನ ಸಮಾಜಮುಖಿ ಕೆಲಸ ಮಾಡಿದರೆ ಸಮಾಜ ಗೌರವಿಸಿ ಸ್ಮರಿಸುತ್ತದೆ ಎಂಬುದಕ್ಕೆ ಪುನೀತ್ ಸಾಕ್ಷಿಯಾಗಿ ನಿಲ್ಲಲಿದ್ದಾರೆ ಎಂದರು.
ಪತ್ರಕರ್ತ ಪ್ರಕಾಶ್ ಬೆಲ್ಲದ್ ಮಾತನಾಡಿ ಎಸ್.ಪಿ.ಬಿ ಕಲಾ ವೇದಿಕೆಯಿಂದ ಇಂದು ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ.ಸಂಘ-ಸಂಸ್ಥೆಗಳು ಹರಿಯುವ ನೀರಿನಂತೆ ಮುನ್ನಡೆಯಬೇಕು ಸಮಾಜಮುಖಿ ಕೆಲಸಗಳ ಮೂಲಕ ಸ್ಪೂರ್‍ತಿದಾಯಕವಾಗಿ ನಿಲ್ಲಬೇಕು ಎಂದರು.
ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ಕೇಕ್ ಕತ್ತರಿಸಿ ಪುನೀತ್ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ ಗಾನ ಗಂಧರ್ವ ಕಲಾ ವೇದಿಕೆ ಗೌರವಾಧ್ಯಕ್ಷ ಸುರೇಶ್ ಗೌಡ, ಕವಯತ್ರಿ ಎ.ಎಂ.ಪದ್ಮಾಕ್ಷಿ, ಉಪಾಧ್ಯಕ್ಷೆ ಮಂಗಳ ವೇಣುಗೋಪಾಲ್, ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಮುತ್ತುರಾಜು, ಸಂಘಟನಾ ಕಾರ್ಯದರ್ಶಿ ದೇವರಾಜ್, ಸಹ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕ ಆರ್.ಮೂರ್ತಿ, ಶಿವಕುಮಾರ್,ನವೀನ್ ಸೇರಿದಂತೆ ಇತರು ಭಾವಹಿಸಿದ್ದರು.
