-ಚಿಮಬಿಆರ್ (ಮಂಜುನಾಥ ಬಿ.ಆರ್)
ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು ಅವರು ಭೌತಿಕವಾಗಿ ಕಣ್ಮರೆಯಾದ ಸುದ್ದಿಯ ನಂತರವೇ ಅವರು ಕೈಗೊಂಡಿದ್ದ ದಾನಶೀಲ ಬದುಕು ಅನಾವರಣಗೊಂಡಿರುವುದು; ಅವರ ವ್ಯಕ್ತಿತ್ವದ ಬಹುದೊಡ್ಡ ನಿದರ್ಶನ. ಅವರು ಮಾಗಿದ ಮಗುವಿನ ಸ್ವರೂಪ. ಅವರಿಗೆ ನಿಜ ಸಂತೋಷದ ಧರ್ಮ ತಿಳಿದಿತ್ತು ಹಾಗಾಗಿಯೇ ಪಡೆದದ್ದನ್ನು ಹಂಚುವುದರಲ್ಲಿ ಸದಾ ನಿರತರಾಗಿದ್ದರು.
ಅವರು ಬಾಲ್ಯದಲ್ಲಿಯೇ ಅಭಿನಯಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾದವರು. ಅವರ ನಟನೆಯ ಬಗ್ಗೆ ಎರಡು ಮಾತಾಡಲು ಅಥವಾ ಕೊಂಕಾಡಲು ಯಾರಿಗೂ ಅವಕಾಶವಿಲ್ಲ. ಅವರು ಅಭಿನಯಿಸಿದ ಆರಂಭದ ಸಿನಿಮಾಗಳಲ್ಲಿ ಮನರಂಜನೆ ಮುಖ್ಯ ಧ್ಯೇಯವಾದರೆ ಇತ್ತೀಚೆಗೆ ತೆರೆಕಂಡ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುವಂತಹ ಸಿನಿ ಕಥೆಯನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಸಮಾಜದ ಕೇಂದ್ರಬಿಂದು ಕುಟುಂಬ; ಆ ಕುಟುಂಬದಲ್ಲಿನ ಸಂಬಂಧಗಳನ್ನು ಸ್ವಚ್ಛಗೊಳಿಸಿದರೆ, ಗಟ್ಟಿಗೊಳಿಸಿದರೆ ಸಮಾಜ ಸ್ವಾಸ್ಥ್ಯ ಕಾಣುವುದಂತೂ ಸತ್ಯ. ಆ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಬಹುದೊಡ್ಡ ಕೊಡುಗೆ ಎನ್ನಬಹುದು. ಶಿಕ್ಷಣ ಕಾಳಜಿ ಅಪ್ಪು ಅವರಲ್ಲಿ ಅದಮ್ಯವಾಗಿತ್ತು. ಮೈಸೂರಿನಲ್ಲಿರುವ ಹೆಣ್ಣು ಮಕ್ಕಳ ಶಾಲೆಯಾದ ಶಕ್ತಿಧಾಮ ಒಂದು ನಿದರ್ಶನ. ಬೆಟ್ಟದ ಹೂ ಸಿನಿಮಾದಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಕೊಳ್ಳಲು ಆ ಬಡತನದಲ್ಲೂ ಶ್ರಮಪಡುವ ಚಿಕ್ಕ ಹುಡುಗನ ಪಾತ್ರವನ್ನು ಪರಕಾಯ ಪ್ರವೇಶದೊಂದಿಗೆ ಪಾತ್ರದ ಜೀವಂತಿಕೆಯನ್ನು ಹಚ್ಚ ಹಸಿರಾಗಿ ಕಾಣಿಸಿರುವುದು ಪುನೀತ್ ರಾಜಕುಮಾರ್ ಅವರಲ್ಲಿದ್ದ ಆಂತರ್ಯದ ಶಿಕ್ಷಣ ಪ್ರೇಮವನ್ನು ಸೂಚಿಸುತ್ತದೆ.
ಅಂದು ಅಪ್ಪು ಅವರ ತಂದೆ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಸಮಾಜ ಸುಧಾರಣೆಯು ಸಿನಿಮಾಗಳ ಮುಖಾಂತರ ಬಂದರೆ; ಆ ಸಮಾಜ ಸುಧಾರಣೆಯನ್ನು ನಿಜ ಜೀವನದಲ್ಲೂ ಪಡಿಮೂಡಿಸಿದ ತಂದೆಗೆ ಹೆಮ್ಮೆಯ ಮಗನಾದ ಅಪ್ಪು ಅವರು ಕನ್ನಡನಾಡಿಗೂ ಹೆಮ್ಮೆಯ ಪುನೀತರು. ಅಣ್ಣಾವ್ರ ಸಿನಿಮಾಗಳು ಎಷ್ಟೋ ಜನರ ವೃತ್ತಿ ಬದುಕನ್ನು ಬದಲಿಸಿತು; ವೃತ್ತಿ ಪ್ರೀತಿಯನ್ನು ಬೆಳೆಸಿತು. ಅಪ್ಪು ಅವರು ಯುವಜನ ಸಮುದಾಯಕ್ಕೆ ಸ್ಫೂರ್ತಿಯಾಗಿ ಹಿರಿಯ ಸಮುದಾಯಕ್ಕೆ ಆಸರೆಯಾಗಿ ಎಲ್ಲರಿಗೂ ದಕ್ಕುವ ನಕ್ಷತ್ರವಾಗಿದ್ದು ಅಭಿಮಾನಿಗಳೆಲ್ಲರ ಅದೃಷ್ಟ. ಅಪ್ಪು ಸಿನಿಬದುಕಿನಲ್ಲಿ ತೋರ್ಪಡಿಸಿದ ಮಾನವೀಯ ನಿಲುವುಗಳು ಅವರ ನಿಜಬದುಕಿನ ವರ್ತನೆಗಳಾಗಿದ್ದರಿಂದಲೇ ಅಪ್ಪು ಎಂದೊಡನೆ ಚಿಕ್ಕಮಕ್ಕಳಿಂದ ವೃದ್ಧರವರೆಗೂ ಅಪ್ಪುವಂತಹ, ಒಪ್ಪುವಂತಹ ಅಭಿಮಾನ ತೋರುವುದು.
ರಾಜಕೀಯ ಮುಕ್ತ ರಾಜಕುಮಾರನಾಗಿ ಕನ್ನಡನಾಡಿನ ಜವಾಬ್ದಾರಿಗಳನ್ನು ಗಮನವಿರಿಸಿ ಸರ್ಕಾರದ ರೈತಪರ, ಶಿಕ್ಷಣಪರ ಜಾಹಿರಾತುಗಳಿಗೆ ಉಚಿತವಾಗಿಯೇ ಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ, ಕನ್ನಡ ಶಾಲೆ, ಕನ್ನಡ ನೆಲ -ಜಲ ಸಂರಕ್ಷಣೆ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಕಲ್ಯಾಣ ಇನ್ನೂ ಹಲವು ಕಾರ್ಯಕ್ರಮಗಳಲ್ಲಿ ಸದುದ್ದೇಶ ಚಿಂತನೆಯ ನೇತಾರರಾಗಿ ಅಥವಾ ಹರಿಕಾರರಾಗಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕದ ಅಜಾತಶತ್ರು ಎನಿಸಿಕೊಂಡಿರುವ ಪುನೀತ್ ಅವರು ಕನ್ನಡ ಸಿನಿ ಸಂಘಟನೆಯ ಚತುರರಲ್ಲಿ ಮುಖ್ಯರು. ಕೆಲವರು ತಮ್ಮ ಅಹಂಗಳನ್ನು, ಪ್ರತಿಷ್ಠೆಗಳನ್ನು ವಿಷಬೀಜವಾಗಿ ಸಿನಿ ಸಂಭಾಷಣೆಯ ಮೂಲಕ ಸಿನಿ ಪ್ರಿಯರಿಗೆ ಉಣಿಸುತ್ತ ಬಂದರೆ; ಪುನೀತ್ ಅವರು ಆ ವಿಷವನ್ನು ತೆಗೆದು ಸೌಹಾರ್ದತೆ ಉಂಟುಮಾಡುವ ಭಾವನೆಗಳನ್ನು, ಸನ್ನಿವೇಶಗಳನ್ನು, ಸಂಭಾಷಣೆಗಳನ್ನು ಅವರ ಸಿನಿಮಾ ಮತ್ತು ಸಿನಿಮಾ ಹೊರತಾದ ಬದುಕಿನಲ್ಲೂ ಸಾಕಷ್ಟು ಕಾಣಿಸಿದ್ದಾರೆ.
ಪರಭಾಷಾ ನಟರ, ಪರಭಾಷಾ ಸಿನಿಪ್ರಿಯರ ಅಭಿಮಾನವನ್ನು ಗಳಿಸುವುದರಲ್ಲೂ ಅವರ ವ್ಯಕ್ತಿತ್ವ ಮೇಲುಗೈ ಸಾಧಿಸಿದೆ. ಅವರು ನಮ್ಮೊಂದಿಗೆ ಪರಮಾತ್ಮನಾಗಿ ನಿಂತ ಕ್ಷಣದಲ್ಲಿ ಅವರ ಅಂತಿಮ ದರ್ಶನಕ್ಕಾಗಿ ಹುಡುಕಿ ಬಂದ ಮಹನೀಯರ ಉಪಸ್ಥಿತಿಯೇ ಇದೆಲ್ಲವನ್ನೂ ಸೂಚಿಸುತ್ತದೆ. ವಿದೇಶಗಳಲ್ಲೂ ಅದರಲ್ಲೂ ಆಗಾಗ ಭಾರತದ ಮೇಲೆ ತಾತ್ಸಾರ, ಮತ್ಸರ ತೋರುವ ಪಾಕಿಸ್ತಾನದಲ್ಲೂ ಇವರ ಅಭಿಮಾನಿಗಳಿರುವುದು ಕಂಡುಬಂದಿದೆ. ಇವರು ಕರ್ನಾಟಕದಲ್ಲಿ ಮಾತ್ರ ಅಜಾತಶತ್ರುವಲ್ಲ; ಇಡೀ ವಿಶ್ವಕ್ಕೇ ಅಜಾತಶತ್ರುವಾಗಿ ಕಾಣಿಸಿಕೊಂಡಿದ್ದಾರೆ. ನನಗೆ ಆಗಾಗ ನೆನಪಾಗುವ ಸಂದೇಶ ಕುವೆಂಪು ಅವರ ವಿಶ್ವಮಾನವ ಸಂದೇಶ. ಈ ಸಂದೇಶಕ್ಕೆ ಸಾದೃಶ್ಯ ವ್ಯಕ್ತಿಯಾಗಿ ಪುನೀತ್ ಅವರು ಕಾಣಿಸಿಕೊಂಡಿದ್ದಾರೆ.
ಪ್ರಾದೇಶಿಕತೆ, ಜಾತೀಯತೆ, ಧರ್ಮದ ಮತ್ತು ಎಲ್ಲಾ ವ್ಯವಸ್ಥೆಗಳ ಪ್ರತ್ಯೇಕತೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಒಂದಾಗಿದ್ದ ಅಪ್ಪು ಅವರು ನಾ ಕಂಡ ಮತ್ತೋರ್ವ ವಿಶ್ವಮಾನವ. ಭಾರತದ ಚೈತನ್ಯ ಸಾಧು, ಸಂತ, ಆಧುನಿಕ ಸನಾತನ ಹರಿಕಾರ ಸ್ವಾಮಿ ವಿವೇಕಾನಂದರು ಮತ್ತು ಭಾರತ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಸುಭಾಷ್ ಚಂದ್ರಬೋಸ್ ಅವರು ಯುವಜನ ಶಕ್ತಿಗೆ ಕೊಟ್ಟಂತಹ ಪ್ರೇರಣೆಯನ್ನು ಪುನೀತ್ ಅವರು ಸಿನಿ ಜಗತ್ತಿನಲ್ಲಿ ಯುವ ಜನಶಕ್ತಿಯ ಪ್ರೇರಕರಾಗಿ ನೆಲೆನಿಂತದ್ದು ಕನ್ನಡಿಗರ ಗೌರವವಾಗಿದೆ.
ಡಾ. ಪುನೀತ್ ರಾಜಕುಮಾರ್ ಅವರನ್ನು ಪ್ರತಿಮೆಗಳಲ್ಲಿ ಸ್ಥಾಪಿಸುವುದು, ವಿವಿಧ ಅಲಂಕಾರಗಳಲ್ಲಿ ಸ್ಥಾಪಿಸುವುದು ಅವರಿಗೆ ಸಲ್ಲಿಸುವ ಗೌರವವೇ ಸರಿ. ಆದರೆ ಬೇರೆಯವರಂತಲ್ಲ ಅಪ್ಪು. ಅವರಿಗೆ ಅನಾಥ ಬಂಧುಗಳನ್ನು ರಕ್ಷಿಸುವುದರಲ್ಲಿ, ಶಿಕ್ಷಣವನ್ನು ಸುಧಾರಿಸುವುದರಲ್ಲಿ, ನೈತಿಕ ಸಮಾಜವನ್ನು ಕಟ್ಟುವುದರಲ್ಲಿ ಬದುಕಿನ ಧರ್ಮವನ್ನು ಹೆಣೆದಿದ್ದರು. ಇನ್ನೂ ಹಲವು ಒಳಿತುಗಳಲ್ಲಿ ಅಪ್ಪು ಅವರು ನೆಲೆ ನಿಂತಿದ್ದರು. ಹೀಗಾಗಿ ಅವರನ್ನು ನಾವು ಇತರರಿಗೆ ಒಳಿತನ್ನು ಮಾಡುವ ಮೂಲಕ ಸದಾ ನೆನೆಯೋಣ. ಯಾರೇ ಕೂಗಾಡಲಿ ಸಿನಿಮಾದಲ್ಲಿ ಅವರೇ ಹೇಳಿದ ಸಂದೇಶ ಕೆಟ್ಟವರಿಗೂ ಒಳ್ಳೆಯದನ್ನೇ ಬಯಸೋಣ ಎಂದು. ಈಗ ನಾವೆಲ್ಲರೂ ಆ ಸಂದೇಶವನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಬದುಕುವುದು ಮುಖ್ಯವಾಗಿದೆ.
ಪ್ರಸ್ತುತದ ದಿನಮಾನಗಳಲ್ಲಿ ಜರುಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸಮಾಜವು ಧಾರ್ಮಿಕವಾಗಿ, ಜಾತೀಯವಾಗಿ ತಪ್ಪುಹಾದಿ ಹಿಡಿಯುತ್ತಿದೆ. ಬಹುಷಃ ಇಂತಹ ಮಹನೀಯರು ನಮ್ಮಿಂದ ಮರೆಯಾದುದರಿಂದಲೇ ಇಷ್ಟೆಲ್ಲಾ ಅನಿಷ್ಟಗಳಿಗೆ ಅವಕಾಶವಾಗಿದೆ ಎನ್ನಬಹುದು. ಇವರುಗಳ ಉಪಸ್ಥಿತಿಯಲ್ಲಿ ಸಮಾಜ ಸ್ವಲ್ಪಮಟ್ಟಿಗಾದರೂ ತಿಳಿಯಾಗಿರುತ್ತಿತ್ತೇನೋ, ನಿಯಂತ್ರಣದಲ್ಲಿ ಇರುತ್ತಿತ್ತೇನೋ ಎನಿಸುತ್ತಿದೆ. ಏನೇ ಆದರೂ ಈ ೨೧ನೇ ಶತಮಾನದಲ್ಲಿ ಕಂಡ ಧೀಮಂತ ಸಿನಿ ಬೆಳಕು ಡಾ.ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಪ್ರತಿ ಮನೆ ಮನದ ಬೆಳಕಾಗಿ ಪ್ರಜ್ವಲಿಸುತ್ತಿದ್ದಾರೆ. ಆ ಬೆಳಕಿನಲ್ಲಿ ನಮ್ಮ ಬದುಕನ್ನು ನಂದನಗೊಳಿಸಿಕೊಳ್ಳೋಣ ಎನ್ನುವುದೇ ನನ್ನ ಮಾತಿನ ತಿರುಳು.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ
ಹೆಚ್.ಡಿ ಕೋಟೆ. ಮೈಸೂರು.
ದೂರವಾಣಿ ಸಂಖ್ಯೆ:-8884684726