ಗುಂಡ್ಲುಪೇಟೆ: ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‍ಪೋನ್ ಬಳಸುವುದನ್ನು ಕಲಿತುಕೊಂಡು ಮೊಬೈಲ್ ಮೂಲಕ ಅಂಕಿ-ಅಂಶಗಳ ಮಾಹಿತಿ ನೀಡಬೇಕೆಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು ತಿಳಿಸಿದರು.
ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ ಮತ್ತು ಶಿಶು ಅಭಿವೃದ್ಧಿ ಇಲಾಖೆ ಗುಂಡ್ಲುಪೇಟೆ ವತಿಯಿಂದ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯ ಐಎಲ್‍ಎ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ಈಗಾಗಲೇ ತಾಲ್ಲೂಕಿನ ಎಲ್ಲಾ ಅಂಗನವಾಡಿಗಳಿಗೆ ಸ್ಮಾರ್ಟ್‍ಪೋನ್ ವಿತರಣೆ ಮಾಡಲಾಗಿದ್ದು, ಅದರ ಬಳಕೆ ಕಡೆಯೂ ಗಮನ ನೀಡಬೇಕು ಎಂದರು.
ಮುಂದಿನ ದಿನದಲ್ಲಿ ಅಂಗನವಾಡಿಗಳಲ್ಲಿ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸ್ಥಳೀಯ ಅಂಗನವಾಡಿಯ ಮಾಹಿತಿಯನ್ನು ಅಲ್ಲಿನ ಶಿಕ್ಷಕರು ಮತ್ತು ಕಾರ್ಯಕರ್ತೆಯರು ಅಪ್‍ಲೋಡ್ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರಬೇಕು. ಜೊತೆಗೆ ಯೋಜನೆಗಳ ಬಗ್ಗೆ ಗರ್ಭೀಣಿಯರು, ತಾಯಂದರಿಗೂ ಸಂಪೂರ್ಣ ಮಾಹಿತಿ ತಿಳಿಸುವಂತಾಗಬೇಕು ಎಂದು ಸಲಹೆ ನೀಡಿದರು.
ತಾಯಂದಿರು, ಗರ್ಭೀಣಿಯರು, ಮಕ್ಕಳ ದಾಖಲಾತಿ, ಆಹಾರ ವಿತರಣೆ, ಗುಣಮಟ್ಟ ಮುಂತಾದ ಮಾಹಿತಿಗಳನ್ನು ಸ್ಮಾರ್ಟ್‍ಪೋನ್ ಮೂಲಕ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಸ್ನೇಹ ಆ್ಯಪ್, ಈ-ಐಎಲ್‍ಎ ಮಾಡೇಲ್‍ಗಳ ಮೂಲಕ ನೀಡುತ್ತಿರುವ ತರಬೇತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ತಂತ್ರಾಶದ ಮೂಲಕ ಮೊಬೈಲ್‍ನಲ್ಲೆ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‍ಪೋನ್ ಬಳಕೆ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರು ಇದಕ್ಕೆ ಹೊಂದಿಕೊಳ್ಳಬೇಕು. ಆ್ಯಪ್ ಬಳಕೆ ಬಗ್ಗೆ ಅರಿವಿಲ್ಲದವರ ಕಡ್ಡಾಯವಾಗಿ ತರಬೇತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯ ತಾಲ್ಲೂಕು ಸಂಯೋಜಕಿ ಚಾಂದಿನಿ, ತಾಲ್ಲೂಕು ಸಂಯೋಜಕರಾದ ಆರ್. ಸಂತೋಷ್, ಅಂಗನವಾಡಿ ಮೇಲ್ವಿಚಾರಕಿ ರುದ್ರವ್ವ ಸೇರಿದಂತೆ ವೃತ್ತವಾರು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ