ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ೨೦೨೧ ಹಾಗೂ ೨೦೨೨ನೇ ಸಾಲಿನಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ  ಈವರೆಗೆ ನೀಡಿರುವ ಪರಿಹಾರಗಳು ಹಾಗೂ ಇನ್ನೂ ಪರಿಹಾರ ನೀಡಬೇಕಿರುವ ಪ್ರಕರಣಗಳ ಕುರಿತು ವಿವರವಾಗಿ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ವಿಳಂಬ ಮಾಡದೇ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಪರಿಹಾರ ನೀಡುವಂತೆ ನಿರ್ದೇಶನ ನೀಡಿದರು. 
ಹನೂರು ತಾಲೂಕಿನ ಸುಳ್ವಾಡಿ ದುರಂತದ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ನೀಡುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಇದೇ ವೇಳೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೆಂಪನಪುರ ಸಿದ್ದರಾಜು, ಆಸೀಫ್‌ಉಲ್ಲಾ ಅವರು ಮಾತನಾಡಿ ಕೆಲವು ಸಂತ್ರಸ್ತ ಅವಲಂಬಿತರ ಪ್ರಸ್ತಾವನೆಗಳು ತಿರಸ್ಕೃತವಾಗಿವೆ. ಇವರಿಗೆ ಮಾನವೀಯತೆ ಆಧಾರದ ಮೇಲೆ ಪರ್ಯಾಯವಾಗಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಪರಿಗಣಿಸಬೇಕಿದೆ ಎಂದರು. 
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ನಾಲ್ವರು ಸಂತ್ರಸ್ತ ಅವಲಂಬಿತರಿಗೆ ಸರ್ಕಾರಿ ಹುದ್ದೆ ನೀಡುವ ಸಂಬಂಧ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ಇನ್ನೂ ಇಬ್ಬರು ಸಂತ್ರಸ್ತ ಅವಲಂಬಿತರ ದಾಖಲಾತಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಸುತ್ತೋಲೆ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು. 
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೆಂಪನಪುರ ಸಿದ್ದರಾಜು, ನಲ್ಲೂರು ಸೋಮೇಶ್ವರ ಕಲಿಗೌಡನಹಳ್ಳಿ ಸಿದ್ದರಾಜು, ಟಿ.ಎಸ್. ರಾಜೇಂದ್ರ, ಆಸೀಫ್ ಉಲ್ಲಾ ಅವರು ಮಾತನಾಡಿ ಸುಳ್ವಾಡಿ ಪ್ರಕರಣದಲ್ಲಿ ನೊಂದವರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಇತ್ತೀಚೆಗೆ ಜಿಲ್ಲಾಡಳಿತ ಆಯೋಜಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ. ಇನ್ನೂ ಹಲವರು ಅನಾರೋಗ್ಯದಿಂದ ಬಳಲುತ್ತಿದ್ದು ನಿರಂತರವಾಗಿ ಚಿಕಿತ್ಸೆ ನೆರವು ಅಗತ್ಯವಿದೆ. ಇದಕ್ಕಾಗಿ ವಿಶೇಷವಾಗಿ ಆರೋಗ್ಯ ಕಾರ್ಡ್ ಇತರೆ ಸೌಲಭ್ಯಗಳ ಮೂಲಕ  ಚಿಕಿತ್ಸೆಗೆ ಮುಂದಾಗಬೇಕಿದೆ ಎಂದರು. 
ಈ ಬಗ್ಗೆ ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆ ವತಿಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ  ಸೂಚಿಸಲಾಗುವುದು. ಸುಳ್ವಾಡಿಯಲ್ಲಿಯೇ ವಿಶೇಷ ಶಿಬಿರ ಆಯೋಜಿಸಿ ಆರೋಗ್ಯ ಕಾರ್ಡ್ ಇನ್ನಿತರ ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. 
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ಎಸಗುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನುಷ್ಠಾನದಲ್ಲಿರುವ ಕಾಯ್ದೆ, ಶಿಕ್ಷೆ ಬಗ್ಗೆ ಎಲ್ಲಾ ವರ್ಗದ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಗಾರ ತರಬೇತಿ ಶಿಬಿರಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಬೇಕು ಎಂದು ಸಲಹೆ ಮಾಡಿದರು. 
ಜಿಲ್ಲಾಧಿಕಾರಿಯವರು ಚಾರುಲತಾ ಸೋಮಲ್ ಅವರು ಮಾತನಾಡಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಕಾರ್ಯಗಾರ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಬೇಕು. ಮುಂದಿನ ಸಭೆಗೂ ಮೊದಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಸಿದ್ದರಾಜು ಅವರು ಮಾತನಾಡಿ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಪ್ರಗತಿ ಪರಿಶೀಲಿಸಿ ಯಾವ ಪ್ರಕರಣಗಳು ಯಾವ ಹಂತಕ್ಕೆ ತಲುಪಿವೆ ಎಂಬ ಬಗ್ಗೆ ವರದಿ ಸಲ್ಲಿಸಬೇಕಿದೆ. ಅಲ್ಲದೇ ಆಯಾ ತಿಂಗಳ ೨೦ನೇ ತಾರೀಖಿನೊಳಗೆ ಪ್ರಕರಣಗಳ ಕುರಿತು ಪುನರಾವಲೋಕನ ಮಾಡಿ ಪರಿಶೀಲಿಸ ಬೇಕಿದೆ. ಇದರಿಂದ ದೌರ್ಜನ್ಯ ಪ್ರಕರಣಗಳಿಗೆ ಶೀಘ್ರ ಪರಿಹಾರ ನ್ಯಾಯ ಸಿಗಲಿದೆ ಎಂದರು. 
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪ್ರಧಾನ ಸರ್ಕಾರಿ ಅಭಿಯೋಜಕರಾದ ಟಿ.ಹೆಚ್. ಲೋಲಾಕ್ಷಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಹೆಚ್.ಸಿ. ಭಾಗೀರಥಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಎಲ್. ಗಂಗಾಧರ್, ಚಿಕ್ಕಬಸವಯ್ಯ, ಜಯಕಾಂತಮ್ಮ, ನಂಜುಂಡೇಗೌಡ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.