ಗುಂಡ್ಲುಪೇಟೆ: ಚಾಮುಂಡೇಶ್ವರಿ ವಿದ್ಯುತ್‍ಚ್ಛಕ್ತಿ ಸರಬರಾಜು ನಿಗಮದವರು ಪ್ರತಿ ಗ್ರಾಮಗಳಿಗೆ ತೆರಳಿ ವಿದ್ಯುತ್ ಬಿಲ್ ಅನ್ನು 5 ದಿನದೊಳಗೆ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡುವುದಾಗಿ ನೋಟಿಸ್ ನೀಡುತ್ತಿದ್ದಾರೆ. ಇದರ ವಿರುದ್ಧ ನ.18ರ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗ್ಯ ಜ್ಯೋತಿ ಸೇರಿದಂತೆ ಇನ್ನಿತರ ಹಲವು ಸಂಪರ್ಕಗಳನ್ನು ಕಡಿತ ಗೊಳಿಸುವುದಾಗಿ ನೋಟಿಸ್ ನೀಡಿರುವ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕರೋನಾ ಒಡೆದದಿಂದ ರೈತರು ತತ್ತರಿಸಿ ಹೋಗಿದ್ದು, ಈ ಮಧ್ಯೆ ವಿದ್ಯುತ್ ಬಿಲ್ ಪಾವತಿಸಿ ಎಂಬುದು ಎಷ್ಟು ಸರಿ?. ಬೆಳೆಗಳಿಗೆ ಸರಿಯಾದ ರೀತಿಯ ಬೆಂಬಲ ಬೆಲೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿರುವ ಸರ್ಕಾರ ಈಗ ವಿದ್ಯುತ್ ಬಿಲ್ ಪಾವತಿಸಿ ಎಂದು ಒತ್ತಡ ಏರುತ್ತಿದೆ ಎಂದು ದೂರಿದರು.
ನ.18ರಂದು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್‍ಚ್ಛಕ್ತಿ ಕಚೇರಿ ಮುಂಭಾಗ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನಿರ್ಧೇಶನದಂತೆ ಜಿಲ್ಲಾ ಅಧ್ಯಕ್ಷರಾದ ಎಪ್ಪಸೂರು ಬಸವಣ್ಣ ಸೇರಿದಂತೆ ಜಿಲ್ಲಾ ಸಮಿತಿ ಒಳಗೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊನ್ನೇಗೌಡನಹಳ್ಳಿ ಶಿವಮಲ್ಲು, ಶಾಂತಮಲ್ಲಪ್ಪ, ಹಂಗಳ ಮಾಧು, ಹಸಿರು ಸೇನೆ ದಿಲೀಪ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಚಹಳ್ಳಿ ಸ್ವಾಮಿ, ನಿಟ್ರೆ ಮಹದೇವಶೆಟ್ಟಿ, ವಸಂತಕುಮಾರ್, ಪಾಪಣ್ಣ, ಲೋಕೇಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ