ಮೈಸೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ನಗರದ ಮೆಟ್ರೋಪೋಲ್ ಸರ್ಕಲ್ ನಲ್ಲಿರುವ ಅರವಿಂದ ಪೆಟ್ರೋಲ್ ಬ್ಯಾಂಕ್ ಬಳಿ  ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ವೈಫಲ್ಯಗಳ ಅಂಕಿ ಅಂಶಗಳನ್ನು ಪಟ್ಟಿ ಮಾಡಿದ ಗೌನ್ ಧರಿಸಿ ವಿನೂತನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು  ಪೆಟ್ರೋಲ್, ಡೀಸೆಲ್ “100 ನಾಟೌಟ್” (ತೈಲ ಬೆಲೆ ಏರಿಕೆ ವಿರುದ್ಧ), ವಿದ್ಯುತ್ ಬೆಲೆ ಏರಿಕೆ ವಿರೋಧಿಸಿದರಲ್ಲದೆ,  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಖಂಡಿಸಿದರು.

ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ  ಡಾ .ಎಂ. ಕೆ. ಅಶೋಕ ರವರ   ನೇತೃತ್ವದಲ್ಲಿ ನಡೆದ  ಪ್ರತಿಭಟನೆಯಲ್ಲಿ   ನೋಟು ಅಮಾನ್ಯಕರಣ,  GST ಅವೈಜ್ಞಾನಿಕ ತೆರಿಗೆಯಿಂದ ಸಾರ್ವಜನಿಕರಿಗೆ ಆದ ತೊಂದರೆ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ  ಸುಳ್ಳು ಭರವಸೆ,  SWISS ಬ್ಯಾಂಕ್ ನಲ್ಲಿರುವ ಕಪ್ಪು ಹಣ ದೇಶಕ್ಕೆ ವಾಪಸ್ಸು ತರುವುದಾಗಿ ಹೇಳಿದ ಸುಳ್ಳು,  ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಉಳಿತಾಯ ಖಾತೆಗೆ ಹಣ ಜಮೆ ಮಾಡದಿರುವುದು,  ದೇಶ ಕಾಯುವ ಯೋಧರ ದಾಳಿಯನ್ನು ಚುನಾವಣಾ ಸಂದರ್ಭದಲ್ಲಿ ತಾನೇ ಮಾಡಿರುವ ರೀತಿ ಬಿಂಬಿಸಿಕೊಂಡಿದ್ದನ್ನು ಖಂಡಿಸಲಾಯಿತು.

ಕರ್ನಾಟಕಕ್ಕೆ ಅಗತ್ಯ ಅನುದಾನ ಸವಲತ್ತು ವಿತರಣೆಯಲ್ಲಿ ತಾರತಮ್ಯ ಮಾಡಿರುವುದು, ಕೊರೊನಾ ಸಂಕಷ್ಟದಲ್ಲಿಯೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸುತ್ತಿರುವುದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಮತ್ತು ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ವಿಕಲಚೇತನರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ಹಾಕಲಾಯಿತು.
ಪ್ರತಿಭಟನೆಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಲೋಕನಾಥ್ ಗೌಡ, ಪ್ರಚಾರ ಸಮಿತಿಯ ಸಂಚಾಲಕರಾದ ಪಿ. ಕುಮಾರ್ ಗೌಡ, ಒಕ್ಕಲಿಗ ಸಂಘದ ಗೌರವಾಧ್ಯಕ್ಷ  ಹಾಗೂ ಡಿಸಿಸಿ ಕಾರ್ಯದರ್ಶಿ ಜಿ. ಕುಮಾರ್ ಗೌಡ, ಮುಖಂಡರಾದ ಜಗ್ಗ ಒಂಟಿಕೊಪ್ಪಲ್, ದಯಾನಂದ್, ಮೂವೀಸ್, ಹಮದ್, ಗಂಗಾಧರ್, ರೋಹನ್  ಇದ್ದರು.

By admin