ಮೈಸೂರು: ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ನ್ಯಾಯಾಂಗವನ್ನು ನಿಂದನೆ ಮಾಡಿದ ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರು ಶುಕ್ರವಾರ ನಗರದ ಕೋರ್ಟ್ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸೋಂಕಿತರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುವಂತಾಗಿದೆ. ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಲಸಿಕೆಯೂ ನೀಡುವಲ್ಲಿಯೂ ಸರ್ಕಾರ ಎಡವಿದ್ದು ಕೇವಲ ರಾಜಕಾರಣ ಮಾಡುವುದರಲ್ಲಿಯೇ ಬಿಜೆಪಿ ಮುಖಂಡರು ದಿನ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಹಿಸಿಕೊಂಡು ಮಾತನಾಡುವ ಭರದಲ್ಲಿ ನ್ಯಾಯಾಂಗದ ವ್ಯವಸ್ಥೆಯನ್ನೇ ಟೀಕಿಸಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಅವರು ಆಗ್ರಹಿಸಿದರು.