ಹಾಸನ: ಮರಳು ಲಾರಿಗಳು ಎಗ್ಗಿಲ್ಲದೆ ಸಂಚಾರ ನಡೆಸುತ್ತಿರುವುದರಿಂದ ಬಡ ಗ್ರಾಮಸ್ಥರು ಕಟ್ಟಿಕೊಂಡ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೂಡಲೇ ಲಾರಿಗಳ ಸಂಚಾರಕ್ಕೆ ಮತ್ತು ಅಕ್ರಮ ಮರಳುಗಾರಿಕೆಗೆ ತಡೆಯೊಡ್ಡಬೇಕೆಂದು ಬೇಲೂರು ತಾಲೂಕಿನ ಸುಳಗಳಲೆ ಹಾಗೂ ನಾರ್ವೆ ಪೇಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೇಲೂರು ತಾಲೂಕಿನ ನಾರ್ವೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲು ಹುನ್ನಾರ ಮಾಡುತ್ತಿರುವುದನ್ನು ಖಂಡಿಸಿರುವ ಪ್ರತಿಭಟನಾಕಾರರಿಗೆ ಸುಳಗಳಲೆ, ಹೆಗ್ಗದ್ದೆ, ನಾರ್ವೆ ಪೇಟೆ ಹಾಗೂ ಉದ್ದಮನ ಹಳ್ಳಿ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ಗ್ರಾಮಪಂಚಾಯಿತಿ ಸದಸ್ಯ ಚಿದಾನಂದ್ ಮಾತನಾಡಿ ಈ ಗ್ರಾಮಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ದಲಿತ ಕುಟುಂಬ ವಾಸವಾಗಿದ್ದು, ಚಿಕ್ಕದಾದ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮರಳು ಲಾರಿಗಳು ಈ ಹಿಂದೆ ಓಡಾಡಿದ ಪರಿಣಾಮವಾಗಿ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಅವರಿಗೆ ಇಲ್ಲಿವರೆಗೂ ಯಾವುದೇ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು. ಸಕಲೇಶಪುರ ಗ್ರಾಮದ ಹೆನ್ನಾಲೆ ಗ್ರಾಮದಲ್ಲಿ ಮರಳು ತೆಗೆಯಲು ಅನುಮತಿ ಸಿಕ್ಕಿದೆ ಆದರೆ ಇದನ್ನು ದುರುಪಯೋಗ ಪಡಿಸಿಕೊಂಡು ಕೆಲ ಜನಪ್ರತಿನಿಧಿಗಳು ಮರಳು ಮಾಫಿಯಾದವರ ಜೊತೆ ಶಾಮೀಲಾಗಿದ್ದಾರೆ. ಒಂದು ವೇಳೆ ಈ ಜಾಗದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಟಿಪ್ಪರ್ ಗಳು ಓಡಾಡುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಾಗ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸಕಲೇಶಪುರ ಕ್ಕೆ ಸಾಗಿಸಲು ಮರಳನ್ನು ನಮ್ಮ ಗ್ರಾಮದ ಮೂಲಕ ತೆಗೆದುಕೊಂಡು ಹೋಗಲು ಹುನ್ನಾರ ನಡೆಸುತ್ತಿದ್ದಾರೆ. ರೈತರು ತಮ್ಮ ಜಮೀನಿಗೆ ಹೋಗಲು ಈ ರಸ್ತೆಯನ್ನು ಅವಲಂಭಿಸಿರುವುದರಿಂದ ಮರಳು ಗಾರಿಕೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಜತೆಗೆ ಸಂಪರ್ಕ ಸೇತುವೆಯೂ ಮುರಿದು ಬೀಳುವ ಹಂತಕ್ಕೆ ಬಂದಿರುವುದರಿಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.