ಗುಂಡ್ಲುಪೇಟೆ: ಕನಿಷ್ಟ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಗುಂಡ್ಲುಪೇಟೆ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಅಕ್ಷರ ದಾಸೋಹ ಹಾಗೂ ಬಿಸಿಯೂಟ ನೌಕರ ಕಾರ್ಯಕರ್ತೆಯರು ರಾಜ್ಯ ಮತ್ತು ಕೇಂದ್ರ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, 2001 ರಲ್ಲಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ವಿಧ್ಯಾಭ್ಯಾಸದ ಕಡೆಗೆ ಏಕಗ್ರಹತೆ, ಗ್ರಹಿಕೆ ಮತ್ತು ಆಕರ್ಷಣೆಯ ಹೆಸರಿನಲ್ಲಿ ಅಕ್ಷರ ದಾಸೋಹ ಯೋಜನೆಯನ್ನು ಪ್ರಾರಂಭಿಸಿ ಸುಮಾರು 11 ಕೋಟಿ 43 ಶಾಲೆಗಳಲ್ಲಿ 25 ಲಕ್ಷ ಬಿಸಿ ಊಟ ನೌಕರರು 10 ಕೋಟಿ ಮಕ್ಕಳಿಗೆ ಪ್ರತಿನಿತ್ಯ ಉಣ ಬಡಿಸುತ್ತಿದ್ದಾರೆ. ಈ ಯೋಜನೆಯನ್ನು ಪ್ರಾರಂಭ ಮಾಡಿದಾಗಿನಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ಮಾಡುವ ಕಡೆಯೇ ಯೋಚಿಸುತ್ತಿದೆ ಎಂದು ಆಕ್ರೋಶ ಭರಿತರಾದರು.
ಭಾರತೀಯ ಕಾರ್ಮಿಕ ಸಮ್ಮೇಳನ ರಾಜ್ಯದ ಹೈಕೋರ್ಟ್ ಮತ್ತು ದೇಶದ ಇತರೆ ಕೋರ್ಟ್‍ಗಳು ಕನಿಷ್ಟ ವೇತನ ಪಾವತಿ ಮಾಡಬೇಕೆಂಬ ನಿರ್ದೇಶನ ಕೊಟ್ಟರು ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ನಮ್ಮ ಬೇಡಿಕೆಗಳಾದ ಕೇಂದ್ರ ಸರ್ಕಾರ ಕಡಿತ ಮಾಡಿರುವ ಶೇ.40 ಅನುದಾನವನ್ನು ಕೊಡಬೇಕು. 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಯೋಜನೆಯಲ್ಲಿ ದುಡಿಯುವವರನ್ನು ಕೆಲಸಗಾರರು ಎಂದು ಪರಿಗಣಿಸಬೇಕು ಮತ್ತು ಶಾಸನಬದ್ಧ ಸವಾಲತ್ತುಗಳನ್ನು ನೀಡಬೇಕು. ಬೆಲೆ ಏರಿಕೆ ಆಧಾರದಲ್ಲಿ 24 ಸಾವಿರ ಕನಿಷ್ಟ ವೇತನವನ್ನು ಜಾರಿ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಸ್ವರೂದಲ್ಲಿಯೂ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಎಲ್ಲಾ ಯೋಜನಾ ನೌಕರರಿಗೂ ನಿವೃತ್ತಿ ಸೌಲಭ್ಯ ಕೊಡಬೇಕು. ದೇಶದ ವಿವಿಧ ರಾಜ್ಯಗಳ ಹೈಕೋರ್ಟ್‍ಗಳು ಬಿಸಿಯೂಟ ನೌಕರರ ಪರವಾಗಿ ಕೊಟ್ಟಿರುವ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ಮಹಾ ಮಾರಿಯ ನಡುವೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯಗಳನ್ನು ನೀಡಬೇಕು. ಕೃಷಿ, ಶಿಕ್ಷಣ, ಆರೋಗ್ಯ, ಮತ್ತು ಇತರ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು. ಪೇಟ್ರೋಲಿಯಂ ಉತ್ಪನ್ನದ ಮೇಲಿನ ಕೇಂದ್ರಿಯ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದು. ಮತ್ತು ಬೆಲೆ ಏರಿಕೆಯನ್ನು ನಿಗ್ರಹಿಸಲು ದೃಢವಾದ ಕ್ರಮ ವಹಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್ ಅವರಿಗೆ ಸಿಐಟಿಯು ಮನವಿ ಸಲ್ಲಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷೆ ಎನ್.ಮಹದೇವಮ್ಮ, ಉಪಾಧ್ಯಕ್ಷೆ ಕೆ.ಎಸ್.ವಿಜಯ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ಖಜಾಂಚಿ ಜ್ವಾಲಾಮುಖಿ, ನಾಗರತ್ನಮ್ಮ, ಸುಧಾರಾಣಿ, ರಾಜಮಣಿ, ಎಸ್.ಶೋಭ, ಲಕ್ಷ್ಮಿ, ಟಿ.ಎಸ್.ರಾಜೇಶ್ವರಿ, ಶಿವಮ್ಮ, ಮಂಗಳಮ್ಮ, ಶಾರದ, ಕೋಮನ, ಶಿವನಾಗಮ್ಮ ಸೇರಿದಂತೆ ಇತರರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ