ಮೈಸೂರು: ಕಳೆದೊಂದು ವರ್ಷದಿಂದ ಛಾಯಾಗ್ರಾಹಕ ವೃತ್ತಿಯನ್ನು ನಂಬಿ ಬದುಕುತ್ತಿರುವವರ ಬದುಕು ಮೂರಾಬಟ್ಟೆಯಾಗಿದ್ದು, ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣದಿಂದಾಗಿ ಜೀವನ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸ ಬೇಕೆಂಬ ಒತ್ತಾಯಗಳು ಕೇಳಿ ಬಂದಿವೆ.
ಈ ನಡುವೆ ಮೈಸೂರಿನ ಸ್ವಾತಂತ್ರ್ಯ ಉದ್ಯಾನವನದ ಗಾಂಧಿ ಪುತ್ಥಳಿ ಎದುರು ಛಾಯಾಗ್ರಾಹಕಿ ಅಂಜಲಿ ಎಂಬುವರು ಸರ್ಕಾರ ಛಾಯಾಗ್ರಾಹಕ ವೃತ್ತಿ ಮಾಡುವವರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಸ್ಮೈಲ್ ಅನ್ನುವವರ ಮುಖದಲ್ಲಿ ನಗು ತರುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಅವರು, ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವೃತ್ತಿ ಬಾಂಧವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕ ಇಲಾಖೆ ವಿವಿಧ ಯೋಜನೆ ಒದಗಿಸಬೇಕು. ಛಾಯಾಗ್ರಾಹಕರಿಗೆ ಕಾರ್ಮಿಕ ಸ್ಮಾರ್ಟ್ ಕಾರ್ಡ್ ನೀಡಬೇಕು. 151 ವರ್ಷದ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ವೆಬ್ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಿ, ವೃತ್ತಿಪರ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕು. ವರ್ಷದ 6 ತಿಂಗಳು ಮದುವೆ, ನಾಮಕರಣ, ಪ್ರಿವೆಡ್ಡಿಂಗ್ ಹೀಗೆ ಹಲವಾರು ಸುಸಂದರ್ಭಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳ ಮೇಲೆ ಲಾಕ್ ಡೌನ್ ಎಫೆಕ್ಟ್ ತಟ್ಟಿದ್ದು, ಇದಕ್ಕೆ ಏಕಾಏಕಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ಮದುವೆ ಹಾಗೂ ಶುಭ ಸಮಾರಂಭಗಳೆಲ್ಲವೂ ರದ್ದಾಗಿವೆ. ಇದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದ ಪರಿಣಾಮ ವ್ಯವಹಾರವೂ ಇಲ್ಲದೆ ಛಾಯಾಗ್ರಾಹಕರ ಕುಟುಂಬಗಳು ಸಂಕಷ್ಟದಲ್ಲಿ ದಿನ ತಳ್ಳುವಂತಾಗಿದೆ. ಆದ್ದರಿಂದ ಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಸರ್ಕಾರ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.