ಚಾಮರಾಜನಗರ: ಹನೂರು ತಾಲೂಕಿನಲ್ಲಿರುವ ಪುರಾತನ ಕಲ್ಯಾಣಿಗಳ ಅಭಿವೃದ್ದಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಪುನಶ್ಚೇತನಗೊಳಿಸಿ, ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚಿಸಿದರು. 
ಹನೂರು ತಾಲೂಕಿನ  ಬಂಡಳ್ಳಿ ಮತ್ತು  ಶಾಗ್ಯ ಗ್ರಾಮ ಪಂಚಾಯತಿಗೆ  ಭೇಟಿ ನೀಡಿ  ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. 
ಕಲ್ಯಾಣಿಗಳ ಸಂರಕ್ಷಣೆ ಅತೀ ಮುಖ್ಯವಾಗಿದೆ. ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಲ್ಯಾಣಿಗಳು ಕಂಡು ಬರುವ ಪಂಚಾಯಿತಿಗಳು ಕಡ್ಡಾಯವಾಗಿ ಪುನಶ್ಚೇತನ ಗೊಳಿಸುವ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. 
ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣಿ ವೀಕ್ಷಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಈ ಸಂಬಂಧ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವಂತೆ ಸೂಚನೆ ನೀಡಿದರು. ನಾರಿಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಲಶಕ್ತಿ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡ ಕೆರೆಗಳನ್ನು ದಾಖಲೀಕರಣ ಮಾಡಬೇಕು. ಪೌಷ್ಠಿಕ ಕೈ ತೋಟ ಮತ್ತು ಮಕ್ಕಳ ಆಟದ ಮೈದಾನ ಕಾಮಗಾರಿಯನ್ನು ಪ್ರಾರಂಭಿಸುವಂತೆ ನಿರ್ದೇಶನ ನೀಡಿದರು. 
ಸಂಜೀವಿನಿ ಯೋಜನೆಯ ಒಕ್ಕೂಟದ ಸದಸ್ಯರ ಜೊತೆ ಸಂವಾದ ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವಾವಲಂಬನೆ ಜೀವನಕ್ಕೆ ಸರ್ಕಾರದ ನೆರವನ್ನು ಸದುಪಯೋಗ ಮಾಡಿಕೊಳ್ಳಬೇಕು. ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸಲಹೆ ಮಾಡಿದರು. 
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್, ಸಹಾಯಕ ನಿರ್ದೇಶಕರಾದ ರವೀಂದ್ರ, ತಾಂತ್ರಿಕ ಸಹಾಯಕ ಎಂಜಿನಿಯರ್ ವಿನಯ್ ಈ ಸಂದರ್ಭದಲ್ಲಿ ಹಾಜರಿದ್ದರು.