ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಂಡು ರೈತರು ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿಯವರು ರೈತರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಆದರೆ ಇದನ್ನು ಸಹಿಸದ ವಿಪಕ್ಷಗಳನ್ನು ಎತ್ತಿಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಇನ್ನೊಂದು ವರ್ಷದಲ್ಲಿ ಬೆಂಗಳೂರನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದು ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ನಗರವನ್ನು ದೇಶದಲ್ಲಿಯೇ ಮಾದರಿ ನಗರವನ್ನಾಗಿಸುವ ಪಣತೊಟ್ಟಿದ್ದು, ಶೀಘ್ರವೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದಾಗಿ ಹೇಳಿದರು.
ರಾಜ್ಯದಲ್ಲಿರುವ ಹಲವು ಪ್ರವಾಸಿತಾಣಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದಾಗಿ ಹೇಳಿದರು. ಅಲ್ಲದೆ, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದಕ್ಕೆ ಮತ್ತು ಇದಕ್ಕೆ ಕಾರಣಕರ್ತರಾದ ಸ್ಥಳೀಯ ಶಾಸಕರು ಸೇರಿದಂತೆ ಪ್ರಮುಖ ಮುಖಂಡರ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ಹೊಸವರ್ಷದ ಶುಭಾಶಯಗಳನ್ನು ನಾಡಿನ ಜನತೆಗೆ ಕೋರಿದರು.