ಕೇರಳ ರಸ್ತೆಯ ಕನ್ನೆಗಾಲ ಟೋಲ್ ಗೆಟ್ ನಲ್ಲಿ ಸ್ಥಳೀಯರಿಗೆ ಫಾಸ್ಟ್ ಟ್ರ್ಯಾಕ್ ಕಡ್ಡಾಯದಿಂದ ವಿನಾಯಿತಿ ನೀಡಬೇಕು ಎಂದು ಗಡಿನಾಡು ರಕ್ಷಣಾ ಸಮಿತಿ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
ಟೋಲ್ ಪ್ಲಾಜಾ ಬಳಿ ಸಮಾವೇಶಗೊಂಡು ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ನಿರ್ಮಿಸಿರುವ ಟೋಲ್ ಮೂಲಕ ತಾಲೂಕಿನ ಕಾಡಂಚಿನ ಗೋಪಾಲಪುರ, ಬೇರಂಬಾಡಿ, ಮದ್ದೂರು, ಕಗ್ಗಳದಹುಂಡಿ, ಚನ್ನಮಲ್ಲೀಪುರ ಇನ್ನೂ ಹಲವು ಗ್ರಾಮಗಳ ಜನರು ಹಾದು ಹೋಗಬೇಕು. ರೈತರು ಜಮೀನುಗಳಿಗೆ ಹೋಗಲು ಟೋಲ್ ಮೂಲಕವೇ ಹೋಗಬೇಕು. ಈ ರೀತಿ ಇರುವಾಗ ನಾವು ಟೋಲ್‍ನಲ್ಲಿ ಹಣ ಪಾವತಿಸಲು ಸಾಧ್ಯವಿಲ್ಲ. ನಮಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಫಾಸ್ಟ್ ಟ್ರ್ಯಾಕ್ ಅಳವಡಿಕೆ ಬಗ್ಗೆ ಮಾಹಿತಿ ಪಡೆದ ಅವರು ಹೊಸ ಆದೇಶವೆಂದು ವಸೂಲಿ ಆರಂಭಿಸಿದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಐ ಮಹದೇವಸ್ವಾಮಿ, ಪಿಎಸ್‍ಐ ಜೆ.ರಾಜೇಂದ್ರ ಫಾಸ್ಟ್ ಟ್ರ್ಯಾಕ್ ಜಾರಿ ಹಂತಗಳ ಬಗ್ಗೆ ಮನವರಿಕೆ ಮಾಡಿದರು.
ಗಡಿನಾಡು ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಬೇರಂಬಾಡಿ ರಂಗಪ್ಪ ನಾಯಕ್, ಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ಸದಸ್ಯರಾದ ಜಿ.ಸ್ವಾಮಿ, ಮಹೇಶ್, ಕಾಂಗ್ರೆಸ್ ಮುಖಂಡ ಭೀಮನಬೀಡು ಮಂಜು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ