ಗುಂಡ್ಲುಪೇಟೆ: ಅರೇಪುರ ಸಮೀಪದ ಕಮರಹಳ್ಳಿ ಗ್ರಾಮದ ಪಕ್ಕದಲ್ಲಿ ಲೀಸ್ ಅವಧಿ ಮುಗಿದ ಗಣಿಗಾರಿಕೆ ಜಾಗದಲ್ಲಿ ತಾಲೂಕಿನ ಹಿರೀಕಾಟಿ ಗ್ರಾಮದ ಆರ್.ಯಶವಂತಕುಮಾರ್ ಮತ್ತೆ ಅಕ್ರಮವಾಗಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ.
ತಾಲೂಕಿನ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ 9.32 ಗುಂಟೆ ಜಾಗದಲ್ಲಿ ಗಣಿಗಾರಿಕೆ ನಡೆಸಲು 2015ರಲ್ಲಿ 5 ವರ್ಷಕ್ಕೆ ದಿಲೀಪ್ ಬಿಲ್ಡ್‍ಕಾನ್ ಕಂಪನಿಗೆ ಲೈಸನ್ಸ್ ನೀಡಲಾಗಿತ್ತು. ಈ ಲೀಸ್ ನವೀಕರಣಗೊಂಡಿಲ್ಲ. ಆದರೂ ಲೀಸ್ ಮುಗಿದ ಜಾಗದಲ್ಲಿ ಗಣಿಗಾರಿಕೆ ಯತ್ನ ನಡೆದಿದೆ ಎನ್ನಲಾಗಿದ್ದು, ದಿಲೀಪ್ ಬಿಲ್ಡ್‍ಕಾನ್ ಕಂಪನಿಗೆ ಸೇರಿದ್ದ ಗಣಿಗಾರಿಕೆ ಲೀಸ್ ಮುಗಿದ ಕ್ವಾರಿಯ ಆಳ ಅಕ್ರಮವಾಗಿ ಮುಚ್ಚಲು ಹಿರೀಕಾಟಿಯ ಕ್ವಾರಿ ಮಾಲೀಕ ಮುಂದಾಗಿದ್ದಾರೆ.
ಈಗಾಗಲೇ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ ನಡೆದಿರುವ ಕ್ವಾರಿಯ ಆಳಕ್ಕೆ ಮಣ್ಣು ಮುಚ್ಚುವ ಕೆಲಸ ನಡೆದಿದೆ. ಅಲ್ಲದೆ ಅಕ್ರಮ ಗಣಿಗಾರಿಕೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ. ದಿಲೀಪ್ ಬಿಲ್ಡ್‍ಕಾನ್ ಕಂಪನಿ ನಡೆದಿರುವ ಗಣಿಗಾರಿಕೆಯಲ್ಲಿ ಕಲ್ಲು ತೆಗೆದಿರುವ ಸಂಬಂಧ ಸುಮಾರು ನಾಲ್ಕೈದು ಕೋಟಿ ದಂಡ ಕಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳಿದೆ ಎಂದಿದ್ದಾರೆ. ಕೋಟ್ಯಾಂತರ ದಂಡ ಕಟ್ಟದ ಕ್ವಾರಿಯ ಆಳ ಮುಚ್ಚಲು ಯತ್ನಿಸಿರುವ ಕ್ವಾರಿ ಮಾಲೀಕರು ಪ್ರಯತ್ನಿಸಿದ್ದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವರದಿ: ಬಸವರಾಜು ಎಸ್.ಹಂಗಳ