ಚಾಮರಾಜನಗರ: ಜಿಲ್ಲೆಯ ಗಡಿಭಾಗದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸ್ಥಿತಿಗತಿ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಅನುಕೂಲವಾಗುವಂತಹ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನವನ್ನು ನಗರದಲ್ಲಿ ಏರ್ಪಡಿಸಲು ಅಗತ್ಯ ಪೂರ್ವಸಿದ್ದತೆ ಕೈಗೊಳ್ಳುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಸೂಚಿಸಿದರು.


ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಪ್ರಜಾವಾಣಿ ದಿನಪತ್ರಿಕೆಯ ಸಹಯೋಗದಲ್ಲಿ ಜಿಲ್ಲೆಯ ಗಡಿಭಾಗದ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತ ವಿಚಾರಸಂಕಿರಣ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿ ಜಿಲ್ಲೆ ಚಾಮರಾಜನಗರವು ವಿಶಿಷ್ಟವಾಗಿದೆ. ಇಲ್ಲಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಇಲ್ಲಿನ ಸಮಸ್ಯೆ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವಂತಹ ವಿಚಾರಗೋಷ್ಠಿ ಆಯೋಜನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ವಿಚಾರಗೋಷ್ಠಿಯ ಫಲಶೃತಿಯಾಗಿ ಹೊರಬರುವ ವಿಷಯಗಳ ಕುರಿತು ಒಂದು ಅಧ್ಯಯನ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಮೇಳದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವ ಎಲ್ಲಾ ಇಲಾಖೆಗಳು ಪಾಲ್ಗೊಳ್ಳಬೇಕಿದೆ. ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ಪೌರಾಣಿಕ, ಚಾರಿತ್ರಿಕ ಸ್ಥಳಗಳು, ಸಾಂಸ್ಕೃತಿಕ ಕಲಾ ವೈಭವ ಕುರಿತು ಸಮಗ್ರ ಚಿತ್ರಣ ಒದಗಿಸುವಂತಾಗಬೇಕು. ವಿಶೇಷವಾಗಿ ಇಲ್ಲಿನ ಗಿರಿಜನರು, ಪರಿಶಿಷ್ಟ ಜಾತಿ, ಇನ್ನಿತರ ಸಮುದಾಯಗಳ ಸಮಸ್ಯೆಗಳು ಚರ್ಚೆಯಾಗಬೇಕು ಎಂದು ಅಧ್ಯಕ್ಷರು ತಿಳಿಸಿದರು.


ಇಲಾಖೆಗಳು ತಮ್ಮ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳು, ಒದಗಿಸುತ್ತಿರುವ ಸೌಲಭ್ಯ ಇನ್ನಿತರ ಮಾಹಿತಿಯನ್ನು ಒಳಗೊಂಡ ವಸ್ತುಪ್ರದರ್ಶನ ಏರ್ಪಡಿಸಬೇಕು. ಇಲ್ಲಿನ ಸಾಂಸ್ಕೃತಿಕ ಕಲಾ ಪರಂಪರೆಗಳನ್ನು ಪರಿಚಯ ಮಾಡಿಕೊಡುವ ಮಾಹಿತಿಯು ಇರಬೇಕು. ಈ ನಿಟ್ಟಿನಲ್ಲಿ ಆಯಾ ಇಲಾಖೆ ಅಧಿಕಾರಿಗಳು ರೂಪುರೇಷೆ ಸಂಬಂಧ ವಿವರ ಸಲ್ಲಿಸುವಂತೆ ತಿಳಿಸಿದರು.
ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏಪ್ರಿಲ್ ಮಾಹೆಯಲ್ಲಿ ಏರ್ಪಡಿಸಲು ಸೂಕ್ತವಾಗಿದ್ದು ದಿನಾಂಕವನ್ನು ನಿರ್ಧರಿಸಲಾಗುವುದು. ಮತ್ತೆ ಸಭೆ ಸೇರಿ ಕಾರ್ಯಕ್ರಮ ಆಯೋಜನೆ ಸಂಬಂಧ ವಿವರವಾಗಿ ಚರ್ಚಿಸಲಾಗುವುದೆಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ತಿಳಿಸಿದರು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ಜಯವಿಭವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ತಹಶೀಲ್ದಾರ್‌ರಾದ ಚಿದಾನಂದ ಗುರುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೆಶಕರಾದ ಅನಿತಾ, ಪ್ರಜಾವಾಣಿ ದಿನಪತ್ರಿಕೆಯ ಬ್ಯೂರೊ ಮುಖ್ಯಸ್ಥರಾದ ಕೆ. ನರಸಿಂಹಮೂರ್ತಿ, ಪ್ರಸರಣ ವಿಭಾಗದ ವ್ಯವಸ್ಥಾಪಕರಾದ ಬಸವರಾಜು, ಗಿರಿಜನರ ಮುಖಂಡರಾದ ಡಾ. ಸಿ. ಮಾದೇಗೌಡ, ಮಾದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಭಾಗೀರಥಿ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.