ಚಾಮರಾಜನಗರ:ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ಮತ್ತು ಚಾಮರಾಜನಗರ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಇದೇ ಅಕ್ಟೋಬರ್ ತಿಂಗಳ ೨೨ರಂದು ಚಾಮರಾಜನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಎಂ.ಎಸ್. ಕಾಯಿದೆ ೨೦೧೩ರ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಕೋಟೆ ಅವರು ಸಿದ್ದತೆಗಳನ್ನು ಪರಿಶೀಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿಗಳು ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಕೋಟೆ ಅವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಷ್ಟಾಚಾರ ಅನುಸಾರ ಜನಪ್ರತಿನಿಧಿಗಳು, ಇತರೆ ಗಣ್ಯರು ಆಗಮಿಸಲಿದ್ದಾರೆ. ಪ್ರತಿಭಾ ಪುರಸ್ಕಾರ, ಅರಿವು ಮೂಡಿಸುವ ಕಾರ್ಯಕ್ರಮ, ಮ್ಯಾನ್ಯುಯಲ್ ಸ್ಕ್ಕಾವೆಂಜಿಂಗ್ ನಿರ್ಮೂಲನೆ ಬಗ್ಗೆ ನಾಟಕ ಪ್ರದರ್ಶನ ಏರ್ಪಾಡಾಗಿವೆ. ಕಾರ್ಯಕ್ರಮದಂದು ಪೂರ್ಣಕುಂಭ ಸ್ವಾಗತ, ಡೊಳ್ಳು ಕುಣಿತ, ನಗಾರಿ ಇನ್ನಿತರ ಕಲಾ ತಂಡಗಳ ಮೆರವಣಿಗೆ ಸಹ ಇರಲಿದೆ. ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೆ ಅಧಿಕಾರಿಗಳು ತೊಡಗಿಕೊಳ್ಳಬೇಕೆಂದು ಅಧ್ಯಕ್ಷರು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ನೀಡಲಾಗುವ ಸವಲತ್ತುಗಳ ಸಂಬಂಧ ವಿವರ ಪಡೆದ ಅಧ್ಯಕ್ಷರು ಪೂರ್ವಭಾವಿಯಾಗಿ ಎಲ್ಲಾ ಸಿದ್ದತೆಗಳ ಬಗ್ಗೆ ತಯಾರು ಮಾಡಿಕೊಳ್ಳಬೆಕು. ಫಲಾನುಭವಿಗಳು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲಾ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳು ಪೂರಕವಾಗಿರುವ ಕ್ರಮಗಳಿಗೆ ಮುಂದಾಗಬೇಕೆಂದು ಅಧ್ಯಕ್ಷರಾದ ಶಿವಣ್ಣ ಅವರು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ ಅವರು ಕಾರ್ಯಕ್ರಮ ಆಯೋಜನೆ ಸಂಬಂಧ ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ವಿವರ ನೀಡಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿಯವರಾದ ಚಂದ್ರಕಲಾ, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯರಾದ ಪುಷ್ಪಲತಾ, ಭಾಗ್ಯ, ಶಂಕರ್, ಮುಖಂಡರಾದ ಬಸವನಪುರ ರಾಜಶೇಖರ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮುತ್ತುರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ನಗರಸಭೆ, ಪುರಸಭೆ ಮುಖ್ಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
