ಮೈಸೂರು: ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬುದು ಗಾಳಿ ಸುದ್ದಿಯಾಗಿದ್ದು, ಅದಕ್ಕೆ ಕಿವಿಗೊಡ ಬಾರದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ನಾನು ಕೂಡ ಆಕಾಂಕ್ಷಿ ಎಂದು ಹೇಳಲು ಇಷ್ಟಪಡುವುದಿಲ್ಲ. ಕಾರಣ ರಾಜ್ಯದಲ್ಲಿ ನನಗಿಂತಲೂ ಹಿರಿಯ ಮತ್ತು ಅನುಭವಿ ಸಂಸದರಿದ್ದಾರೆ ಎಂದರಲ್ಲದೆ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ಅಇದಕ್ಕಿಂತ ದೊಡ್ಡ ಹುದ್ದೆ ಬೇಕಾಗಿಲ್ಲ  ಎಂದು ತಿಳಿಸಿದರು.

ನನ್ನ ಮೇಲೆ ವಿಶ್ವಾಸವಿರಿಸಿ ಮೈಸೂರು ಮತ್ತು ಕೊಡಗಿನ ಜನ ಆಯ್ಕೆ ಮಾಡಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಿದ್ದು, ಸಂಸದನಾಗಿ ನನಗೆ ಇದಕ್ಕಿಂತಲೂ ದೊಡ್ಡ ಹುದ್ದೆ ಮತ್ತು ಸಂತೋಷ ಬೇರೇನು ಇಲ್ಲ. ಬೇರೆ ನಿರೀಕ್ಷೆಯನ್ನು ಕೂಡ ಮಾಡಲ್ಲ. ಮಾಡಲು ಬಹಳಷ್ಟು  ಕೆಲಸವಿದ್ದು ಅದಕ್ಕೆ ಸಮಯ ಮತ್ತು ಮೈಸೂರು, ಕೊಡಗು ಜನರ ಸಹಕಾರ ಅಗತ್ಯವಿದೆ. ನಾನು ಮೈಸೂರು ಹಾಗೂ ಕೊಡಗಿಗೆ ಸೀಮಿತವಾಗಿ ಕೆಲಸ ಮಾಡಲು ಇಷ್ಟಪಡುವುದಾಗಿ ಹೇಳಿದರು.

ಇನ್ನು ನಗರದಲ್ಲಿ ಎದ್ದಿರುವ ಎನ್ ಟಿ ಎಂ ಶಾಲೆ ಮತ್ತು ವಿವೇಕ ಸ್ಮಾರಕ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು  ಸ್ವಾಮಿ ವಿವೇಕಾನಂದರು ಯಾವುದೇ ಪ್ರಬಲ ಜಾತಿ, ಜನಾಂಗ, ಸಮುದಾಯಕ್ಕೆ ಸೇರಿದವರಲ್ಲ, ಒಂದು ವೇಳೆ ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಇಂದು ಸ್ಮಾರಕ ನಿರ್ಮಾಣದ ವಿವಾದವೇ ಬರುತ್ತಿರಲಿಲ್ಲ. ಸ್ಮಾರಕ ಆದರೂ ನಿರ್ಮಿಸಿ ಪುತ್ಥಳಿ ಬೇಕಾದರೂ ತಂದಿಡಿ ಯಾರೂ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ಸ್ಮಾರಕ ನಿರ್ಮಾಣವಾಗಿ ವರ್ಷಗಳೇ ಕಳೆಯುತ್ತಿತ್ತು. ಅವರಿಗೆ ಜಾತಿಯ ಬೆಂಬಲವಿಲ್ಲದ ಕಾರಣ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಇದು ಮೈಸೂರು ನಗರಕ್ಕೆ ಆಗುತ್ತಿರುವ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

ವಿವೇಕಾನಂದರನ್ನು ಮೈಸೂರು ಮಹಾರಾಜರೇ ಪ್ರೀತಿ ಗೌರವದಿಂದ ಆದರಿಸಿದ್ದು, ಮಹಾರಾಜರು ಗೌರವ ನೀಡಿದ ವ್ಯಕ್ತಿಯ ಸ್ಮಾರಕ ನಿರ್ಮಾಣಕ್ಕೆ ವಿರೋಧಿಸುವುದು ಸಂಕುಚಿತ ಮನಸ್ಸಗಳು ಮೈಸೂರಿನಲ್ಲಿವೆ ಎಂಬುದನ್ನು ತೋರಿಸುತ್ತದೆ ಎಂದರು.

By admin