ಗುಂಡ್ಲುಪೇಟೆ: 7.5 ಮೀಸಲಾತಿಗಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ನಡೆಸುತ್ತಿರುವ ಕಾರಣ ಅವರಿಗೆ ಬೆಂಬಲ ಸೂಚಿಸಲು ಏ.12ರ ಮಂಗಳವಾರ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಲ್ಮೀಕಿ ಮಹಾ ಸಭಾದ ವಕ್ತಾರರಾದ ನಾಗೇಂದ್ರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 58 ದಿನದಿಂದಲೂ 7.5 ಮೀಸಲಾತಿಗಾಗಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ನಡೆಸುತ್ತಿದ್ದರೂ ಕೂಡ ಇಲ್ಲಿಯ ತನಕ ಸರ್ಕಾರದ ಯಾವೊಬ್ಬ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸದಿರುವುದು ದುರದೃಷ್ಟಕರ. ಇದನ್ನು ಗಮನಿಸಿದರೆ ಹಿಂದುಳಿದ ವರ್ಗದವರನ್ನು ರಾಜಕೀಯ ಪಕ್ಷಗಳು ಕೇವಲ ಮತ ಬ್ಯಾಂಕ್‍ಗಾಗಿ ಬಳಿಸಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಅಂಬೇಡ್ಕರ್ ಸೇನೆಯ ತಾಲ್ಲೂಕು ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿ, ಮೀಸಲಾತಿ ನೀಡುವ ಕುರಿತು ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ತರಲು ಬದ್ದವಿರುವುದಾಗಿ ಹಿಂದಿನ ಸರ್ಕಾರಗಳು ಹೇಳಿದ್ದವು. ಸಮೀಕ್ಷೆಯ ನಂತರ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಬಹುದು ಎಂದು ಆಯೊಗ ತಿಳಿಸಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಮೀಸಲಾತಿ ಜಾರಿ ಮಾಡುವಲ್ಲಿ ಮೀನಾಮೇಶ ಎಣಿಸುತ್ತಿವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದೆ ವೇಳೆ ಮತ್ತು ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಮೀಸಲಾತಿ ಹೆಚ್ಚಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭಾ ಸದಸ್ಯರಾದ ಶ್ರೀನಿವಾಸ್ ಕಣ್ಣಪ್ಪ, ಎನ್.ಕುಮಾರ್, ವಾಲ್ಮೀಕಿ ನಾಯಕ ಮಹಾಸಭಾದ ಖಜಾಂಜಿ ಪ್ರದೀಪ್, ನಾಗರಾಜು(ಕ್ರೇಜಿ), ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್, ಸಾಹುಕಾರ್ ಪಡೆಯ ರಮೇಶ್,
ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ದೀಪಕ್, ಟೌನ್ ಅಧ್ಯಕ್ಷ ಗಿರೀಶ್, ಜಯಕರ್ನಾಟಕ ಉಪಾಧ್ಯಕ್ಷ ಮಾಚೇಶ್ ಸೇರಿದಂತೆ ಇತರರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ