ಮೈಸೂರು: ಕಳೆದ ವರ್ಷ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಉಚಿತ ಪಡಿತರವನ್ನು ವಿತರಿಸುವ ಕಾರ್ಯವನ್ನು ಸರ್ಕಾರ ಮಾಡಿತ್ತು. ಇದು ಬಹಳಷ್ಟು ಬಡ ಕುಟುಂಬಗಳಿಗೆ ಆಧಾರವಾಗಿತ್ತು. ಆ ನಂತರ ಪಡಿತರ ಅಕ್ಕಿಯನ್ನು ಕಡಿತಗೊಳಿಸಿರುವುದು ಬಡವರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ಪಡಿತರ ಅಕ್ಕಿಯನ್ನು ಕಡಿತಗೊಳಿಸಿದ ಸಂದರ್ಭದಿಂದ ಇಲ್ಲಿವರೆಗೆ ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಬಂದಿವೆ. ಇದೀಗ ಲಾಕ್ ಡೌನ್ ಘೋಷಣೆಯಾಗಿದೆ ಬಡವರಿಗೆ ಕೆಲಸವೂ ಇಲ್ಲ. ಪಡಿತರ ಅಕ್ಕಿಯೂ ಇಲ್ಲ. ಇಂತಹ ಸಂದರ್ಭದಲ್ಲಿ ಜೀವನ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ಕೇಳುತ್ತಿವೆ. ಸರ್ಕಾರ ಈ ಸಂಬಂಧ ಇದುವರೆಗೆ ಯಾವುದೇ ರೀತಿಯ ಸ್ಪಷ್ಟನೆ ನೀಡದಿರುವುದರಿಂದಾಗಿ ಮುಂದೇನು ಎಂಬ ಚಿಂತೆ ಆವರಿಸಿದೆ.
ಪಡಿತರ ಅಕ್ಕಿಯನ್ನು ಕಡಿತ ಮಾಡದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಲೇ ಬಂದಿದ್ದರೂ ಅದಕ್ಕೆ ಸರ್ಕಾರ ಸೊಪ್ಪು ಹಾಕಿಲ್ಲ. ಆದ್ದರಿಂದ ಈಗ ಮೈಸೂರಿನಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಮಂತ್ರಿಗಳಿಗೆ ಪೋಸ್ಟ್ ಕಾರ್ಡ್ ಚಳುವಳಿಯನ್ನು ಹಮ್ಮಿಕೊಂಡಿದೆ.
ಅದರಂತೆ ಮೇ.೮ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ಎನ್.ಎಸ್. ರಸ್ತೆಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಎದುರು ಅನಾಥಾಲಯ ಪೋಸ್ಟ್ ಆಫೀಸ್ (ಪೋಸ್ಟ್ ಬಾಕ್ಸ್) ಬಳಿ ಜನವಿರೋಧಿ ಪಡಿತರ ಅಕ್ಕಿ ೨ ಕೆ.ಜಿಯಿಂದ “ಅನ್ನಭಾಗ್ಯ” ಯೋಜನೆಯ ೧೦ ಕೆ.ಜಿ ಅಕ್ಕಿಯನ್ನು ನೀಡುವಂತೆ ಹಾಗೂ ಕೋವಿಡ್- ೧೯ ಸೋಂಕಿತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಬೆಡ್, ಐ.ಸಿ.ಯು, ಆಕ್ಸಿಜನ್ ಗಳನ್ನು ನೀಡಿ ಸಮರ್ಪಕವಾಗಿ ಚಿಕಿತ್ಸೆ ನೀಡಲು ಆಗ್ರಹಿಸಿ ಪೋಸ್ಟ್ ಕಾರ್ಡ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಪೋಸ್ಟ್ ಕಾರ್ಡ್ ಚಳವಳಿಗೆ ಡಿಸಿಸಿ ಅಧ್ಯಕ್ಷರಾದ ಆರ್. ಮೂರ್ತಿ, ಡಾ. ಬಿ.ಜೆ. ವಿಜಯ್ ಕುಮಾರ್, ಮಾಜಿ ಶಾಸಕ ಎಂ .ಕೆ .ಸೋಮಶೇಖರ್, ಕೆ. ಹರೀಶ್ ಗೌಡ, ಬ್ಲಾಕ್ ಅಧ್ಯಕ್ಷ ಸುಂದರ್ ಕುಮಾರ್, ಸೋಮಶೇಖರ್ ಸಾಥ್ ನೀಡಲಿದ್ದಾರೆ. ಚಳವಳಿಯಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು .ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಅಶೋಕ್ ತಿಳಿಸಿದ್ದಾರೆ.