ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದ ಪೂರ್ಣ ಧನಾತ್ಮಕ ಮಾಹಿತಿ ನೀಡಲು ಐದು ಜನರ ತಂಡವೊಂದು ‘ನಮ್ಮ ಗುಂಡ್ಲುಪೇಟೆ’ ಎಂಬ ಹೆಸರಿನ ಲೋಗೋ ತಯಾರಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಂದ ಬಿಡುಗಡೆಗೊಳಿಸಿದ್ದಾರೆ. ಆ ಲೋಗೋ ಇದೀಗ ತಾಲ್ಲೂಕಿನಾದ್ಯಂತ ಹೆಚ್ಚಿನ ಮನ್ನಣೆ ಗಳಿಸಿದೆ.

ಗುಂಡ್ಲುಪೇಟೆಯನ್ನು ಬ್ರಾಂಡ್ ಮಾಡುವ ಯೋಚನೆ ಮತ್ತು ತಾಲ್ಲೂಕಿನಲ್ಲಿ ಇರುವ ಮಾಹಿತಿಯನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪಟ್ಟಣದ ಐದು ಜನ ಯುವಕರ ತಂಡವೊಂದು ಪ್ರಿನ್ಸ್ ಹುಲಿ ಭಾವಚಿತ್ರವನ್ನು ಬಳಸಿ ‘ನಮ್ಮ ಗುಂಡ್ಲುಪೇಟೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೇಜ್ ಒಂದನ್ನು ತೆರೆದು ಉತ್ತಮ ಮಾಹಿತಿ ನೀಡುತ್ತಿದೆ.

ಅರುಣ್ ಮಹದೇವ್, ಸಂತೋಷ್, ಮಂಜು, ಪರಶಿವಮೂರ್ತಿ, ರೋಹಿತ್ ನಾಯಕ್ ‘ನಮ್ಮ ಗುಂಡ್ಲುಪೇಟೆ’ ತಂಡದಲ್ಲಿದ್ದಾರೆ.
ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯಲ್ಲಿ ಪ್ರವಾಸಿಗರಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪ್ರಿನ್ಸ್ ಹುಲಿಯ ಭಾವಚಿತ್ರವನ್ನು ಲೋಗೋದಲ್ಲಿ ಬಳಸಲಾಗಿದೆ. ಇದರಿಂದ ಮತ್ತಷ್ಟು ಮೆರೆಗು ಹೆಚ್ಚಿದ್ದು, ಸ್ಥಳೀಯರನ್ನು ಸೆಳೆಯುತ್ತಿದೆ.

ಪೇಜ್‍ನಲ್ಲಿ ತಾಲ್ಲೂಕಿನ ದೇವಾಲಯ, ಕೆರೆ-ಕಟ್ಟೆ, ಬೆಟ್ಟಗುಡ್ಡ, ರಸ್ತೆ, ಪರಿಸರ, ಪ್ರಾಣಿ-ಪಕ್ಷಿ ಸೇರಿದಂತೆ ಇನ್ನಿತರ ಕೂತುಹಲಕಾರಿಯಾಗಿರುವ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಚಿತ್ರ ಮತ್ತು ವಿಡಿಯೋ ಸಮೇತ ಅಪೆÇ್ಲೀಡ್ ಮಾಡುತ್ತಿದ್ದಾರೆ.

ಸ್ಥಳೀಯ ಛಾಯಾಗ್ರಾಹಕ ಶಕ್ತಿ ಪ್ರಸಾದ್ ಸೆರೆ ಹಿಡಿದ ಪ್ರಿನ್ಸ್ ಹುಲಿ ಭಾವಚಿತ್ರವನ್ನು ನಮ್ಮ ಗುಂಡ್ಲುಪೇಟೆ ಲೋಗೋದಲ್ಲಿ ಬಳಸಲಾಗಿದೆ. ಐದು ಜನರ ತಂಡ ಫೇಸ್‍ಬುಕ್‍ನಲ್ಲಿ ‘ನಮ್ಮ ಗುಂಡ್ಲುಪೇಟೆ’ ಹೆಸರಿನಲ್ಲಿ ಮಾಹಿತಿ ನೀಡುತ್ತಿದ್ದು, ಇನ್ಟ್ರಾಗ್ರಾಂ ಹೆಚ್ಚು ಪ್ರಸಿದ್ದವಾದ್ದರಿಂದ 2018ರಿಂದ ಅದರಲ್ಲೂ ಖಾತೆ ತೆರೆದು ತಾಲ್ಲೂಕಿನಲ್ಲಿ ಜರುಗುವ ವಿವಿಧ ಕಾರ್ಯಕ್ರಮ, ವಿಶೇಷತೆಗಳ ಬಗ್ಗೆ ಮಾಹಿತಿ ಅಪ್‍ಲೋಡ್ ಮಾಡುತ್ತಿದ್ದಾರೆ.

ಈ ಪೇಜ್ ಕೋವಿಡ್-19 ಸಮಯದಲ್ಲಿ ಕೋವಿಡ್ ರೋಗಿಗೆ ರಕ್ತ ಒದಗಿಸಲು ಸಹಾಯವಾಗಿದೆ. ಕ್ಯೂಆರ್ ಕೋಡ್ ಸ್ಕಾನ್ ಮಾಡುವುದರ ಮೂಲಕ ಫೇಸ್‍ಬುಕ್ ಮತ್ತು ಇನ್ಟ್ರಾಗ್ರಾಂನಲ್ಲಿ ನೇರವಾಗಿ ಫೇಜ್ ತೆರೆದುಕೊಳ್ಳುತ್ತದೆ. ನಮ್ಮ ಪೇಜ್ ಹೆಚ್ಚು ಪ್ರಚಲಿತವಾಗುತ್ತಿರುವುದರಿಂದಾಗಿ ಅನೇಕರು ಲಾಂಛನವನ್ನು ದುರ್ಬಳಕೆ ಮಾಡಿಕೊಂಡು ತಮ್ಮದು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ತಂಡದ ಸದಸ್ಯರಾದ ಅರುಣ್ ಮಹದೇವ್ ಹೇಳಿದರು.

ಈ ಪೇಜ್ ತೆರೆಯಲು ವೈಯಕ್ತಿಕವಾಗಿ ಹಣ ವ್ಯಯ ಮಾಡಿದ್ದು, ಇದರಿಂದ ನಮಗೆ ಆದಾಯವೇನು ಇಲ್ಲ. ಕೆಲ ಮುಂದುವರೆದ ತಾಲ್ಲೂಕು ಪ್ರಸಿದ್ಧಿ ಪಡೆದಿರುವಂತೆ ಗುಂಡ್ಲುಪೇಟೆಯೂ ಕೂಡ ಏನಾದರೂ ಬ್ರಾಂಡ್ ಆಗಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ ಎಂದು ತಂಡದ ಐದು ಮಂದಿ ಸದಸ್ಯರು ತಿಳಿಸಿದರು.

ಈ ತಂಡದವರು ಮಾಡಿರುವ ನಮ್ಮ ಗುಂಡ್ಲುಪೇಟೆ ಪೇಜ್‍ನಿಂದ ತುಂಬಾ ಉಪಯೋಗ ಆಗುತ್ತದೆ. ತಾಲ್ಲೂಕು ಅನೇಕ ಸಂಪನ್ಮೂಲಗಳಿಂದ ಕೂಡಿದ್ದರೂ ಸಹ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಅದಕ್ಕೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ನಮ್ಮ ಗುಂಡ್ಲುಪೇಟೆ ತಂಡದವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಪುರಸಭಾ ಸದಸ್ಯ ತಿಳಿಸಿದರು.

– ಬಸವರಾಜು ಎಸ್ ಹಂಗಳ

By admin