ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಕೇರಳಪುರ ಹೋಟಲ್ ಮುಂಭಾಗ ಮತ್ತು ತಾಲ್ಲೂಕು ಕಚೇರಿ ಪಕ್ಕ ಚರಂಡಿ ಕುಸಿದಿದೆ.

ಚರಂಡಿ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಸಿ.ಎಸ್. ನಿರಂಜನಕುಮಾರ್ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಇಂಜಿನಿಯರ್ ಹಾಗು ಗುತ್ತಿಗೆದಾರರು ಸ್ಥಳದಲ್ಲಿ ಇಲ್ಲದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಾಮಗಾರಿ ಪರಿಶೀಲನೆ ವೇಳೆ ಮೂರನೇ ಹಂತದ ಗುತ್ತಿಗೆದಾರ ಶಾಸಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡದೇ ಮೌನ ವಹಿಸಿದ್ದರು. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ ಎಂಬ ಸಬೂಬು ಹೇಳಿ ಜಾರಿಕೊಂಡರು.

ಈ ವೇಳೆ ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ಪಟ್ಟಣ ತಾಲ್ಲೂಕು ಕಚೇರಿಗೆ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಅಂತಹ ಸ್ಥಳದಲ್ಲೆ ಚರಂಡಿ ಕಾಮಗಾರಿ ಕಳಪೆಯಿಂದ ನಡೆಯಬಾರದು. ಮುಂದೆ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳು ಗಮನ ವಹಿಸಬೇಕು. ಜೊತೆಗೆ ಗುತ್ತಿಗೆದಾರರು ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.

ಕಾಮಗಾರಿ ಸ್ಥಗಿತಕ್ಕೆ ಸೂಚನೆ:
ಕಾಮಗಾರಿ ವೀಕ್ಷಣೆ ವೇಳೆ ಇಂಜಿನಿಯರ್ ಹಾಗೂ ಗುತ್ತಿಗೆದಾರ ಸ್ಥಳದಲ್ಲಿದ ಕಾರಣ ಅವರು ಬರುವವರೆಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ವೇಳೆ ಪುರಸಭಾ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸದಸ್ಯರಾದ ರಮೇಶ್, ನಾಗೇಶ್, ರಂಗಸ್ವಾಮಿ(ಪಟ್ಟಾಬಿ), ರಾಜ್‍ಗೋಪಾಲ್, ಪುರಸಭಾ ಮುಖ್ಯಾಧಿಕಾರಿ ರಮೇಶ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

By admin