
ಚಾಮರಾಜನಗರ: ಪೋಲಿಯೋನಂತಹ ಮಾರಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಆಗತಾನೆ ಹುಟ್ಟಿದ ಮಗುವಿನಿಂದ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಒಳಾವರಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶಾದ್ಯಂತ ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪ್ರತಿವರ್ಷದಂತೆ ಈ ಬಾರಿಯು ಸಹ ಜಿಲ್ಲೆಯಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪೋಲಿಯೋ ಈ ಹಿಂದೆ ಮಾರಕ ರೋಗವಾಗಿ ಪರಿಣಮಿಸಿತ್ತು. ಪ್ರಸ್ತುತ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೂ ಸಹ ಮಕ್ಕಳ ಆರೋಗ್ಯ ಮುನ್ನೆಚ್ಚರಿಕೆಗಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಮಾತನಾಡಿ ಮಗುವಿನ ಪರಿಪೂರ್ಣ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ನೀಡುವುದು ಅವಶ್ಯವಾಗಿದೆ. ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ಅವರು ಮಾತನಾಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಚಾಮರಾಜನಗರ ತಾಲೂಕಿನ ೨೩೪೫೬, ಗುಂಡ್ಲುಪೇಟೆ ೧೩೬೫೬, ಕೊಳ್ಳೇಗಾಲ ೧೧೪೭೨, ಹನೂರು ೧೩೭೯೨ ಹಾಗೂ ಯಳಂದೂರು ತಾಲೂಕಿನಲ್ಲಿ ೬೦೦೪ ಸೇರಿದಂತೆ ಒಟ್ಟು ೬೮೩೮೦ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್ ಅವರು ಮಾತನಾಡಿ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿ ಪೋಲಿಯೋ ಇನ್ನೂ ಜೀವಂತವಾಗಿರುವುದರಿಂದ ಮುಂಜಾಗ್ರತೆಯಾಗಿ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಮಕ್ಕಳಲ್ಲಿ ಉಂಟಾಗುವ ಅಂಗವಿಕಲತೆ ತಡೆಗಟ್ಟಬಹುದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷರಾದ ಪಿ. ಸುಧಾ, ಪೌರಾಯುಕ್ತಾದ ಪಲ್ಸ್ ಪೋಲಿಯೋ ಕಲ್ಯಾಣ ಸಮಿತಿಯ ಸಿ.ವಿ. ಶ್ರೀನಿವಾಸ್ ಅವರುಗಳು ಕಾರ್ಯಕ್ರಮದಲ್ಲಿ ಮಾತನಾಡಿ ಪೋಲಿಯೋ ಹನಿ ಮಹತ್ವವನ್ನು ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎನ್. ಮಹದೇವ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಆಶ್ವಥ್ ನಾರಾಯಣ್, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣಸ್ವಾಮಿ, ಮಂಚಯ್ಯ, ಶಾಂತಮ್ಮ, ದೊರೆಸ್ವಾಮಿನಾಯ್ಕ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಳಿಕ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧನಾ ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಭಾಗವಹಿಸಿ ಶುಭ ಹಾರೈಸಿದರು.
ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ಅವರು ಸ್ವತಹ: ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವವನ್ನು ತಿಳಿಸಿ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
