ಮೈಸೂರು: ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದರಿಂದ ಪರಿಸರದ ನೈಜತೆಗೆ ಧಕ್ಕೆಯಾಗುವುದರೊಂದಿಗೆ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎನ್.ಎಮ್. ನವೀನ್ ಕುಮಾರ್ ಹೇಳಿದರು.
ವಿಶ್ವ ಪ್ಲಾಸ್ಟಿಕ್ ಬಳಕೆ ನಿಷೇಧ ದಿನದ ಅಂಗವಾಗಿ ನಗರದ ಸುಬ್ಬರಾಯನ ಕೆರೆ ಸಂತೆಪೇಟೆಯಲ್ಲಿ ಪ್ಲಾಸ್ಟಿಕ್ ನಾಶ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಹಾಗೂ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳಲ್ಲಿ ಅರಿವು ಮೂಡಿಸಿದರು.
ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಅಂಗಡಿಮುಂಗಟ್ಟುಗಳಲ್ಲಿ ಪದಾರ್ಥಗಳನ್ನು ನೀಡುವಾಗ ಮಾಲೀಕರು ಪ್ಲಾಸ್ಟಿಕ್ ಬಳಕೆಯನ್ನು ಮಾಡದಿದ್ದರೆ ಪ್ಲಾಸ್ಟಿಕ್ ಬಳಕೆ ತಡೆಯಬಹುದು ಎಂದು ಕಿವಿ ಮಾತು ಹೇಳಿದರಲ್ಲದೆ, ಪ್ಲಾಸ್ಟಿಕ್ ಜಾಲವನ್ನು ಮೈಸೂರಿನಲ್ಲಿ ನಿಷೇಧಿಸಲು ನಗರಪಾಲಿಕೆ ಅಧಿಕಾರಿಗಳು ವಿಶೇಷ ತಂಡ ರಚಿಸಬೇಕಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ರೈಲ್ವೆ ವಿಭಾಗ ವೃತ್ತನಿರೀಕ್ಷಕರಾದ ಶ್ರೀನಿವಾಸ್, ಪೌರಕಾರ್ಮಿಕರಾದ ಮಹಾದೇವ್, ಜೈನ್ ಸಮಾಜದ ಮುಖಂಡರಾದ ಕಾಂತಿಲಾಲ್, ಮಂಜುನಾಥ್ ಇನ್ನಿತರರು ಇದ್ದರು.