ಮೈಸೂರು: ಪಿರಿಯಾಪಟ್ಟಣದಲ್ಲಿ ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಬಳಿಕ ಕೆರೆಗೆ ಎಸೆದು ಪರಾರಿಯಾಗಿದ್ದ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ನಿವಾಸಿ ಸೈಯದ್ ಜಲೀಲ್, ಫಯಾಜ್ ಅಹ್ಮದ್ ಮತ್ತು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಪುಟ್ಟರಂಗ ಬಂಧಿತ ಹಂತಕರು. ಪಿರಿಯಾಪಟ್ಟಣದ ಕೆ.ಎಂ ಬಡಾವಣೆಯ ನಿವಾಸಿ ಉದಯ್ ಎಂಬಾತನನ್ನು ಕೊಲೆಯಾದವನು.
ಪಟ್ಟಣದ ಹಳೆಯ ಮಹದೇಶ್ವರ ಟೆಂಟ್ ನ ಪಕ್ಕ ಫಯಾಜ್ ಅಹಮದ್ ಎಂಬಾತ ಗುಜರಿ ಅಂಗಡಿ ನಡೆಸುತ್ತಿದ್ದನು. ಈತನ ಗುಜರಿ ಅಂಗಡಿಯಲ್ಲಿ ಕಟ್ಟೆಮಳಲವಾಡಿ ಗ್ರಾಮದ ಪುಟ್ಟರಂಗ ಕೆಲಸ ಮಾಡುತ್ತಿದ್ದರೆ, ಸಯ್ಯದ್ ಜಲೀಲ್ ಮತ್ತು ಉದಯ್ ಗುಜರಿ ವಸ್ತುಗಳನ್ನು ತಂದು ಫಯಾಜ್ ಅಹಮದ್ ಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಅದೇ ಗುಜರಿ ಅಂಗಡಿಯಲ್ಲಿ ವಾಸ್ತವ್ಯ ಹೂಡಿದ್ದರು.
ಜೂ.21ರಂದು ಮಧ್ಯರಾತ್ರಿ ಉದಯ್ ಮತ್ತು ಸಯ್ಯದ್ ಜಲೀಲ್ ನಡುವೆ ಗುಜರಿ ಅಂಗಡಿಯಲ್ಲಿ ಜಗಳವಾಗಿದೆ ಈ ವೇಳೆ ಪಾನಮತ್ತನಾಗಿದ್ದ ಉದಯ್ ಮದ್ಯದ ಬಾಟಲಿಯಿಂದ ಜಲೀಲ್ ಗೆ ಹೊಡೆದಿದ್ದನು. ಇದರಿಂದ ಕೋಪಗೊಂಡ ಸಯ್ಯದ್ ಜಲೀಲ್ ಮಲಗಿದ್ದ ಉದಯ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಲ್ಲದೆ, ಶವವನ್ನು ಗುಜರಿಯ ಹಿಂಭಾಗ ಹಾಕಿದ್ದನು.
ಈ ಬಗ್ಗೆ ಗುಜರಿ ಅಂಗಡಿ ಮಾಲೀಕ ಫಯಾಜ್ ಅಹ್ಮದ್ ಗೆ ತಿಳಿದು ಕೆಲಸಗಾರ ಪುಟ್ಟರಂಗ ಹಾಗೂ ಸಯ್ಯದ್ ಜಲೀಲ್ ಸಹಾಯದೊಂದಿಗೆ ಶವವನ್ನು ಚೀಲದಲ್ಲಿ ಸುತ್ತಿ ತನ್ನ ಗುಜರಿ ಅಂಗಡಿ ಪಕ್ಕದಲ್ಲಿರುವ ಅರಸಿನಕೆರೆಗೆ ಎಸೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಚೇತನ್, ಅಪರ ಎಸ್ಪಿ ಶಿವಕುಮಾರ್, ಡಿವೈಎಸ್ಪಿ ರವಿಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್, ಪಿಎಸ್ ಐ ಸದಾಶಿವ ತಿಪ್ಪಾರೆಡ್ಡಿ, ಎಎಸ್ ಐ ಗಳಾದ ಜಯರಾಮೇಗೌಡ, ಚಿಕ್ಕನಾಯಕ, ಸಿಬ್ಬಂದಿ ಅಂಟೋನಿ ಕ್ರೂಸ್, ಅಸ್ಲಂ ಪಾಷಾ, ಸತೀಶ್, ರವೀಶ್, ಗವಿಗೌಡ, ಕುಮಾರಸ್ವಾಮಿ, ಹಬೀಬುಲ್ಲಾ, ಸಿಬ್ಬಂದಿ ಪ್ರಕಾಶ್, ಮಹದೇವ್, ಅನಂತ್, ರಾಜರತ್ನಂ, ಮಹದೇವ್, ಗಣೇಶ್, ಬಶೀರ್ ಮೊದಲಾದವರನ್ನೊಳಗೊಂಡ ತನಿಖಾ ತಂಡ ಮೂವರು ಹಂತಕರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.