ಪಿರಿಯಾಪಟ್ಟಣ:ನಮ್ಮ ಕರುನಾಡು ನಮಗೆ ಜನ್ಮ ಕೊಟ್ಟ ತಾಯಿಗೆ ಸಮಾನ ಎಂದು ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಅಭಿಪ್ರಾಯಪಟ್ಟರು.
ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನಮ್ಮ ತಾಯಿಗೆ ಕೊಡುವ ಗೌರವವನ್ನು ತಾಯಿನಾಡಿಗೂ ಕೊಡಬೇಕು ನಮ್ಮ ನೆಲ, ಜಲ ,ಕಲೆ ಸಂಸ್ಕೃತಿಗಳ ಉಳಿವಿಗೆ ನಾವೆಲ್ಲಾ ಕಟಿಬದ್ದರಾಗಬೇಕು ಅದು ವಿದ್ಯಾರ್ಥಿ ದಿಸೆಯಿಂದಲೇ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳು ಕೇವಲ ಅಕ್ಷರ ಜ್ಙಾನಿಗಳಾದರೆ ಸಾಲದು ಅದು ಸಾಕಾರಗೊಳ್ಳಬೇಕಾದರೆ ದೇಶ, ಭಾಷೆ ರಕ್ಷಣೆಗೆ ಒತ್ತು ಕೊಡಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಮಹದೇವಯ್ಯ ಮಾತನಾಡಿ ಬೇರೆ ಭಾಷೆಗಳನ್ನು ಕಲಿಯಬೇಕು , ಆದರೆ ತಾಯಿ ಭಾಷೆ ಕನ್ನಡವನ್ನು ಮರೆಯಬಾರದು , ಕನ್ನಡನಾಡಿಗೆ ಭವ್ಯಪರಂಪರೆಯ ಇತಿಹಾಸವಿದೆ.ಇದನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ನಾವೆಲ್ಲಾ ಹೋರಾಡಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಧಾನ ಭಾಷಣಕಾರರಾಗಿ ಹಿಂದಿ ಶಿಕ್ಚಕಿ ಪೂರ್ಣಿಮಾ ‘ ಮಾತನಾಡಿ 1905 ರಲ್ಲಿ ಮೈಸೂರು ಸಂಸ್ಥಾನ ಏಕೀಕರಣವಾಗಿ ಅದರ ನೇತೃತ್ವವನ್ನು ಹುಯಿಲಗೊಳನಾರಾಯಣರಾವ್ ವಹಿಸಿದ್ದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, 1950 ರಲ್ಲಿ ಗಣರಾಜ್ಯವಾಯಿತು.ಆಗ ಮೈಸೂರು ಸಂಸ್ಥಾನ , ಹೈದ್ರಾಬಾದ್ ಕರ್ನಾಟಕ ,ಮುಂಬೈ ಕರ್ನಾಟಕ , ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿತ್ತು .1956 ನ.1 ರಂದು ಕನ್ನಡ ಮಾತನಾಡುವ ಭಾಷಾವಾರು ಪ್ರಾಂತಗಳು ಒಟ್ಟಾಗಿ ಅಂದು ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂದು ನಾಮಕರಣಮಾಡಲಾಯಿತು. ಆ ದಿನವನ್ನು ನಾವು ನಾಡಹಬ್ಬವಾಗಿ ಆಚರಿಸುತ್ತಿದ್ದೇವೆ. ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಮ್ಮ ಕಲೆ, ಸಂಸ್ಕೃತಿ , ನೆಲ ,ಜಲ ದ ಪರಂಪರೆಯನ್ನು ಪರಿಚಯಿಸುವ ಶಕ್ತಿ ಕನ್ನಡ ಭಾಷೆಗೆ ಇದೆ. ಬೇರೆ ಭಾಷೆಗಳನ್ನು ಕಲಿಯಬೇಕು, ಮಾತೃ ಭಾಷೆ ಕನ್ನಡವನ್ನು ಮರೆಯಬಾರದು, ಆ ನಿಟ್ಟಿನಲ್ಲಿ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಾರದಮ್ಮ , ಸಂಜಯ್‌ ಕುಮಾರ್, ಗೀತಾ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳಿಗೆ ನೃತ್ಯ ನೆರವೇರಿತು.
ಇದೇ ಸಂದರ್ಭ ಎಸ್ಡಿಎಂಸಿ ಸದಸ್ಯ ರಾಜೇಶ್ , ಶಿಕ್ಷಕರಾದ ಮಹೇಶ್, ಪ್ರಸನ್ನ , ಭಾಗ್ಯ , ಗಿರಿಜಾ , ಭವಾನಿ , ಶಾಲಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.