ಗುಂಡ್ಲುಪೇಟೆ: ಜಲ್‍ಜೀವನ್ ಮಿಷನ್ ಯೋಜನೆಯಡಿ ತೆಗೆದಿರುವ ಪೈಪ್‍ಲೈನ್‍ನ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿಸದ ಕಾರಣ ಓಡಾಟಕ್ಕೆ ತೊಂದರೆಯಾಗಿದೆ ಎಂದು ಕೆಲಸೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಲವು ಬೀದಿಗಳಲ್ಲಿ ಜಲ್‍ಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಹಾಕುವ ಕಾರ್ಯ ಆಗುತ್ತಿದೆ. ಇದಕ್ಕಾಗಿ ಪರಿಶಿಷ್ಟ ಪಂಗಡದ ಸಮುದಾಯದವರಾದ ನಮ್ಮ ಬೀದಿಯಲ್ಲಿ ಹಾಕಿದ್ದ ಕಾಂಕ್ರೀಟ್ ರಸ್ತೆಯನ್ನು ಯಂತ್ರದ ಸಹಾಯದಿಂದ ಅಗೆಯಲಾಗಿದೆ. ಆದರೆ ಪೈಪ್‍ಲೈನ್ ಹಾಕಿದ ನಂತರ ನಿರುಪಯುಕ್ತ ಕಾಂಕ್ರಿಟ್ ಉಂಡೆಗಳನ್ನು ಹೊರ ಸಾಗಿಸಿಲ್ಲ. ಮಣ್ಣನ್ನು ಸಮರ್ಪಕವಾಗಿ ಗುಂಡಿಗೆ ಮುಚ್ಚಿಲ್ಲ ಎಂದು ದೂರಿದರು.
ಪ್ರಸ್ತುತ ಮಳೆಯಾಗುತ್ತಿರುವ ಕಾರಣ ರಸ್ತೆ ಕೆಸರುಮಯವಾಗಿದ್ದು, ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾಂಕ್ರಿಟ್ ಉಂಡೆಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಕುಡಿಯುವ ನೀರಿನ ಸೌಲಭ್ಯ ಪಡೆಯುವ ಸಲುವಾಗಿ ನಾವು ಉತ್ತಮವಾಗಿದ್ದ ರಸ್ತೆಯನ್ನು ಕಳೆದುಕೊಂಡಂತಾಗಿದೆ. ಸಮರ್ಪಕವಾಗಿ ಗುಂಡಿ ಮುಚ್ಚಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಕೇಳಿದರೆ ಗುತ್ತಿಗೆದಾರರು ಬೇಕಿದ್ದರೆ ನೀವೇ ಗುಂಡಿ ಮುಚ್ಚಿಕೊಳ್ಳಿ ಎಂದು ಉತ್ತರಿಸುತ್ತಾರೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದವರಾದ ಕರವೇ ಹೋಬಳಿ ಘಟಕದ ಅಧ್ಯಕ್ಷ ಸ್ವಾಮಿ, ಶಿವನಾಯಕ, ಮಲ್ಲನಾಯಕ, ಮಹದೇವನಾಯಕ ಒತ್ತಾಯಿಸಿದ್ದಾರೆ.
ವರದಿ: ಬಸವರಾಜು ಎಸ್.ಹಂಗಳ.