ಮೈಸೂರು,ಜೂ.೬ ಮನೆ ಮುಂದೆ ಬೈಕ್ ನಿಲ್ಲಿಸುವ ಸಾರ್ವಜನಿಕರೇ ಎಚ್ಚರ. ಮೊದಲೆಲ್ಲ ಬೈಕ್ ಕಳ್ಳತನವಾಗ್ತಿತ್ತು, ಇದೀಗ ಬೈಕ್ ಇರುತ್ತೆ ಆದ್ರೆ ಪೆಟ್ರೋಲ್ ಇರಲ್ಲ. ಹೌದು, ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ ಪೆಟ್ರೋಲ್ ಗೆ ಖದೀಮರು ದಿನ ನಿತ್ಯ ಕನ್ನ ಹಾಕುತ್ತಿದ್ದಾರೆ.
ಇಂತಹದೊಂದು ಘಟನೆ ಮೈಸೂರಿನ ೫೦ ನೇ ವಾರ್ಡ್ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ನಾರಯಣ ಶಾಸ್ತ್ರಿ ರಸ್ತೆಯ ಮನೆಗಳಲ್ಲಿ ನಡೆದಿದೆ. ಪೆಟ್ರೋಲ್ ದರ ಹೆಚ್ಚಳ ಹಿನ್ನೆಲೆ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ ಪೆಟ್ರೋಲ್ ಕ್ಯಾಪ್‌ನ್ನು ಸಲಾಕೆ ಇಂದು ಹಿರಿದು ಕಳ್ಳರು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದು.
ಮೈಸೂರಿನ ಸುಣ್ಣದಕೇರಿಯಲ್ಲಿ ರಾತ್ರಿ ವೇಳೆ ಸುಮಾರು ೧೦ರಿಂದ ೧೫ ಬೈಕ್‌ಗಳಲ್ಲಿ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ.ಪ್ರತಿನಿತ್ಯ ಪೆಟ್ರೋಲ್ ಕಳ್ಳತನದಿಂದ ನಿವಾಸಿಗಳು ರೋಸಿಹೋಗಿದ್ದು, ಪೊಲೀಸರು ರಾತ್ರಿ ಗಸ್ತು ತಿರುಗುತ್ತಿಲ್ಲ ಹಾಗೂ ಸಿಸಿಟಿವಿ ಇಲ್ಲದ ಕಾರಣ ಎಗ್ಗಿಲ್ಲದೇ ಚಾಲಾಕಿಗಳು ಪೆಟ್ರೋಲ್ ಕದಿಯುತ್ತಿದ್ದಾರೆ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.