* ಎಂಸಿಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಎಸ್ ಟಿ ಎಸ್ ಶ್ಲಾಘನೆ
* ಕೃಷಿ ಸಾಲ ವಿತರಣೆಯಲ್ಲೂ ಗುರಿಗಿಂತ ಹೆಚ್ಚಿನ ಸಾಲ ನೀಡಿಕೆ
* ಪ್ರತಿ ಡಿಸಿಸಿ ಬ್ಯಾಂಕ್ ನಲ್ಲಿ ಖುದ್ದು ಸಭೆ ನಡೆಸಿದ ಸಹಕಾರ ಸಚಿವರೆಂದರೆ ಸೋಮಶೇಖರ್ ಮಾತ್ರ; ಹರೀಶ್ ಗೌಡ
ಮೈಸೂರು: ಪ್ರಸಕ್ತ ಸಾಲಿನಲ್ಲಿ ರೈತರಿಗೆ ಹಾಗೂ ನಾಗರಿಕರಿಗೆ ಸಾಲ ನೀಡಿಕೆ ಗುರಿ ಮುಟ್ಟಲಾಗಿದೆಯೇ ಎಂಬ ಬಗ್ಗೆ ಖುದ್ದು ಡಿಸಿಸಿ ಬ್ಯಾಂಕ್ ಗಳಿಗೆ ತೆರಳಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಎಂಸಿಡಿಸಿಸಿ ಬ್ಯಾಂಕ್ ಸಾಧನೆ ನಿಜಕ್ಕೂ ಹೆಮ್ಮೆ ತಂದಿದ್ದು, ಗುರಿ ಮೀರಿ ಸಾಧನೆ ಮಾಡಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಸರ ಬ್ಯಾಂಕ್ ನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ 63 ಸಾವಿರ ರೈತರಿಗೆ 497 ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಗುರಿ ಮೀರಿ ಸಾಧನೆ ಮಾಡಿದ್ದು, 63036 ರೈತರಿಗೆ 574 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬಡವರ ಬಂಧು, ಸ್ತ್ರೀ ಶಕ್ತಿ ಕಾಯಕ, ಎಸ್ಸಿ ಎಸ್ಟಿ ಹಾಗೂ ಅಲ್ಪಾವಧಿ, ಮಧ್ಯಮಾವಧಿ ಸಾಲಗಳ ಅಡಿಯಲ್ಲಿ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಶೇಕಡಾ 82ರಷ್ಟು ಗುರಿ ಸಾಧಿಸಲಾಗಿದೆ. ಇದೇ ಫೆಬ್ರವರಿ ಮಾಸಾಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧಿಸಲು ನಾನು ಪ್ರತಿ ಡಿಸಿಸಿ ಬ್ಯಾಂಕ್ ಗಳಿಗೆ ಖುದ್ದು ಭೇಟಿ ನೀಡಿದಂತಹ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸೂಚನೆ ನೀಡುತ್ತಿದ್ದೇನೆ. ಮಾರ್ಚ್ ಒಳಗೆ ಸಾಲ ನೀಡಿಕೆ ಗುರಿ ತಲುಪುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಹೈನುಗಾರಿಕೆಯಲ್ಲೂ ಗುರಿಗಿಂತ ಹೆಚ್ಚು ಸಾಲ ನೀಡಿಕೆ; ಎಸ್ ಟಿ ಎಸ್ ಮೆಚ್ಚುಗೆ
ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಹೈನುಗಾರಿಕೆಯಲ್ಲಿ 3 ಸಾವಿರ ರೈತರಿಗೆ 6 ಕೋಟಿ ರೂ. ಸಾಲ ವಿತರಣಾ ಗುರಿ ಹೊಂದಲಾಗಿತ್ತು. ಆದರೆ, ಇದನ್ನು ಮೀರಿ 3520 ರೈತರಿಗೆ 6.64 ಕೋಟಿ ಸಾಲ ನೀಡಲಾಗಿದೆ. ವಸೂಲಾತಿ ಶೇ. 92 ರಷ್ಟಿದ್ದು, ಚಿನ್ನದ ಮೇಲಿನ ಬಡ್ಡಿ ಸಾಲವನ್ನು ಸಹ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಲಮನ್ನಾ ಬಾಕಿ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುವೆ; ಸಚಿವ ಎಸ್ ಟಿ ಎಸ್
ಎಂಸಿಡಿಸಿಸಿ ಬ್ಯಾಂಕ್ ನಿಂದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬಹುತೇಕ ರೈತರಿಗೆ ಸಾಲ ಮನ್ನಾ ಪ್ರಯೋಜನ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಕೆಲವರಿಗೆ ಲಭಿಸಿಲ್ಲದೆ ಇರಬಹುದು. ಅದನ್ನು ನಿವಾರಿಸುವತ್ತಲೂ ಗಮನಹರಿಸಲಾಗುವುದು ಎಂದು ತಿಳಿಸಿದ ಸಚಿವರು, ಸಾಲಮನ್ನಾದ ಬಾಕಿ ಸರ್ಕಾರದಿಂದ ಬರಬೇಕಿದ್ದು, ಆ ಮೊತ್ತ ತಂದುಕೊಡುವಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತರಿಸಿಕೊಡುಲಾಗುವುದು ಎಂದು ತಿಳಿಸಿದರು.
ಟಿ.ನರಸೀಪುರ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಶೇ. 98ರಷ್ಟು ಸಾಲ ನೀಡಲಾಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಒಬ್ಬ ರೈತ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ನೇರವಾಗಿ ಸಾಲ ದೊರೆಯುತ್ತಿದೆ. ಇದು ಉತ್ತಮ ವಿಷಯ ಎಂದು ಸಚಿವರು ತಿಳಿಸಿದರು.
ನಬಾರ್ಡ್ ನಿಂದ 1787 ಕೋಟಿ ವಿಶೇಷ ಅನುದಾನದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಗೆ 75 ಕೋಟಿ ರೂಪಾಯಿ ಲಭಿಸಿದ್ದು, ಸಮರ್ಪಕವಾಗಿ ಉಪಯೋಗಿಸಿ, ಎಲ್ಲರಿಗೂ ಸಾಲ ದೊರೆಯುವಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಯಾವುದೇ ಒಂದು ದೂರು ಬಾರದಂತೆ ಬ್ಯಾಂಕ್ ನ ಆಡಳಿತ ಮಂಡಳಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.
ಬದ್ಧತೆಯುಳ್ಳ ಎಂಸಿಡಿಸಿಸಿ ಬ್ಯಾಂಕ್
ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ಸಹಿತ ಇಡೀ ಆಡಳಿತ ಮಂಡಳಿ ಬದ್ಧತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. ಗುರಿಯನ್ನುಮೀರಿ ಸಹ ಕೆಲಸ ಮಾಡಿದೆ. ಆದರೆ, ಪ್ರವಾಸ ವೇಳೆ, ತುಮಕೂರು ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡಿರುವುದು ಗಮನ ಸೆಳೆದಿದೆ. 4611 ಮಂದಿಗೆ ಬಡವರ ಬಂಧು ಅಡಿಯಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ವಿತರಣೆ ಮಾಡಿದ್ದು, 21 ಡಿಸಿಸಿ ಬ್ಯಾಂಕ್ ಗಳಲ್ಲಿಯೇ ಉತ್ತಮ ಸಾಧನೆ ಇದಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಸಾಲ ನೀಡಿಕೆಯಲ್ಲಿ ಶೇ. 29 ಹೆಚ್ಚಳ
ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಾಕಿಕೊಳ್ಳಲಾದ ಸಾಲ ನೀಡಿಕೆ ಗುರಿ ಹಾಗೂ ಇದುವರೆಗೂ ಯಾವ ಯಾವ ವಿಭಾಗದಲ್ಲಿ ಎಷ್ಟು ಸಾಲ ನೀಡಲಾಗಿದೆ…? ಕೆಸಿಸಿ ಸಾಲ, ಮಧ್ಯಮಾವಧಿ ಸಾಲ, ಕೃಷಿಯೇತರ ಸಾಲ ನೀಡಿಕೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇಕಡಾ 29ರಷ್ಟು ಹೆಚ್ಚಳ ಕಂಡಿದೆ. ಈ ಎಲ್ಲ ವಿಭಾಗದಲ್ಲಿ 31/03/2019ಕ್ಕೆ 62329.14 ಕೋಟಿ ರೂಪಾಯಿ ಸಾಲ ನೀಡಿದ್ದರೆ, 31/03/2020ಕ್ಕೆ 76573.30 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿತ್ತು. ಅದೇ 31/12/2020 ಕ್ಕೆ 98899.90 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ ಎಂದು ಸಿಇಒ ಜನಾರ್ದನ್ ಸಭೆಗೆ ಮಾಹಿತಿ ನೀಡಿದರು.
ಪ್ರತಿ ಡಿಸಿಸಿ ಬ್ಯಾಂಕ್ ನಲ್ಲಿ ಖುದ್ದು ಸಭೆ ನಡೆಸಿದ ಸಹಕಾರ ಸಚಿವರೆಂದರೆ ಸೋಮಶೇಖರ್ ಮಾತ್ರ; ಹರೀಶ್ ಗೌಡ
ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ ಮಾತನಾಡಿ, ನಾನು ಕಳೆದ 8 ವರ್ಷಗಳಿಂದ ಡಿಸಿಸಿ ಬ್ಯಾಂಕ್ ನಲ್ಲಿ ನಿರ್ದೇಶಕ ಸ್ಥಾನದಲ್ಲಿಯೂ ಕಾರ್ಯನಿರ್ವಹಿಸಿದ್ದೇನೆ. ಆದರೆ, ಸಹಕಾರ ಸಚಿವರೊಬ್ಬರು ಹೀಗೆ ಡಿಸಿಸಿ ಬ್ಯಾಂಕ್ ಗಳಿಗೆ ಖುದ್ದು ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ಕೊಟ್ಟು ಸಭೆ ನಡೆಸುವುದು ಇದೇ ಪ್ರಥಮ ಹಾಗೂ ಸೋಮಶೇಖರ್ ಅವರೇ ಮೊದಲಿಗರು. ಇಂತಹ ಒಬ್ಬ ಸಹಕಾರ ಸಚಿವರು ಲಭಿಸಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಪ್ರತಿ ಭೇಟಿ ವೇಳೆ ಸಭೆ ನಡೆಸುವುದಲ್ಲದೆ, ಅಗತ್ಯ ಸಲಹೆ – ಸೂಚನೆಗಳನ್ನು ನೀಡುತ್ತಾರೆ. ಅಲ್ಲದೆ, ಪ್ರತಿ ರೈತರ ಕಷ್ಟಗಳಿಗೆ ಸ್ಪಂದಿಸುವ ಗುಣಗಳನ್ನು ಹೊಂದಿದ್ದಾರೆ. ಇದು ಸಚಿವರ ಕಾರ್ಯವೈಖರಿಗೆ ಹಾಗೂ ಪಾರದರ್ಶಕತೆಗೆ ಹಿಡಿದ ಕೈಗನ್ನಡಿ. ನಮಗೆ ಒಳ್ಳೆಯ ಸಹಕಾರ ಸಚಿವರು ಲಭಿಸಿದ್ದಾರೆ ಎಂದು ಹರೀಶ್ ಗೌಡ ತಿಳಿಸಿದರು.
ಕೋವಿಡ್ 19 ರ ಸಂದರ್ಭದಲ್ಲಿ ಸಹಕಾರ ಸಂಘ ಸಂಸ್ಥೆಗಳ ಮೂಲಕ ರಾಜ್ಯದ 42608 ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಿದ ಖ್ಯಾತಿ ನಮ್ಮ ಸಹಕಾರ ಸಚಿವರಾದ ಸೋಮಶೇಖರ್ ಅವರದ್ದಾಗಿದೆ. ಮೈಸೂರಿನಲ್ಲಿ 2850 ಆಶಾ ಕಾರ್ಯಕರ್ತೆಯರಿಗೆ 75 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಹರೀಶ್ ಗೌಡ ತಿಳಿಸಿದರು.
ಈ ಮೂಲಕ ಸರ್ಕಾರದ ಒಂದು ಯೋಜನೆಯ ಸಂಪೂರ್ಣ ಅನುದಾನವು ನೇರವಾಗಿ ಯಾವುದೇ ಹಸ್ತಕ್ಷೇಪವಿಲ್ಲದೆ ತಲುಪಿದೆ ಎಂದರೆ ಅದಕ್ಕೆ ಸಹಕಾರ ಸಚಿವರ ನೇತೃತ್ವ ಕಾರಣ. ಅಲ್ಲದೆ, ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಖುದ್ದು ಸಚಿವರಾದ ಸೋಮಶೇಖರ್ ಅವರೇ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸಿಗುವಂತೆ ನೋಡಿಕೊಂಡಿದ್ದಾರೆ ಎಂದು ಹರೀಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿಗಳು ಹಾಜರಿದ್ದರು.