ಚಾಮರಾಜನಗರ: ಸಂತೇಮರಹಳ್ಳಿ ಭಾಗದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಲಸಿಕೆ ಕಾರ್ಯ ಹಾಗೂ ಕೋವಿಡ್ ಪರೀಕ್ಷೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸಂತೇಮರಹಳ್ಳಿ ವ್ಯಾಪ್ತಿಯ ಕುದೇರು ಹಾಗೂ ಉಮ್ಮತ್ತೂರು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರಲ್ಲದೆ, ಎಷ್ಟು ಜನರಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತಿದೆ. ಎಷ್ಟು ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಖುದ್ದು ಮಾಹಿತಿ ಪಡೆದರು.
ಪ್ರತಿದಿನ ಕನಿಷ್ಠ 200 ಜನರಿಗೆ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲೇಬೇಕು. ಹೆಚ್ಚು ಜನರು ಲಸಿಕೆ ಪಡೆದುಕೊಳ್ಳಲು ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಪ್ರತಿದಿನ ಹೆಚ್ಚಿನ ಗುರಿ ನಿಗದಿ ಮಾಡಿಕೊಂಡು ಇದಕ್ಕೆ ತಕ್ಕಂತೆ ಮತ್ತಷ್ಟು ಅಗತ್ಯ ವ್ಯವಸ್ಥೆಗಳನ್ನು ಪೂರ್ವಭಾವಿಯಾಗಿ ಕೈಗೊಂಡು ಲಸಿಕಾ ಕಾರ್ಯದಲ್ಲಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು. ಪ್ರಸ್ತುತ ಲಸಿಕೆ ನೀಡಲು ನಿಗದಿ ಮಾಡಲಾಗಿರುವ ವೇಳಾ ಸಮಯವನ್ನು ಸಂಜೆಯವರೆಗೂ ವಿಸ್ತರಿಸಬೇಕು. ಜನರನ್ನು ಹೆಚ್ಚು ಹೊತ್ತು ಕಾಯದಂತೆ ನೋಡಿಕೊಳ್ಳಬೇಕು ಎಂದರು.
ವಿಶೇಷ ಚೇತನರು, ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರು ಸೇರಿದಂತೆ ಆದ್ಯತಾ ಗುಂಪಿನ ಫಲಾನುಭವಿಗಳಿಗೆ ಲಸಿಕೆ ನೀಡಬೇಕು. ವಿಶೇಷ ಚೇತನರನ್ನು ಜವಾಬ್ದಾರಿಯಿಂದ ಆಯಾ ಭಾಗದ ಪುನರ್ವಸತಿ ಕಾರ್ಯಕರ್ತರು, ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ಕರೆತಂದು ಲಸಿಕೆ ಹಾಕಿಸಬೇಕು. ದೇಮಹಳ್ಳಿ, ಬಾಗಳಿ, ಬೋಗಾಗಪುರ ಸೇರಿದಂತೆ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಲಸಿಕೆಗಳನ್ನು ನೀಡುವ ವ್ಯವಸ್ಥೆ ಮಾಡಬೇಕು. ಇದರಿಂದ ವಿಶೇಷ ಚೇತನರಿಗೂ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ಹಾಜರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಗ್ರಾಮದ ಜನತೆ ಲಸಿಕೆ ಪಡೆಯಲು ಪೂರ್ಣ ಸಹಕಾರ ನೀಡಬೇಕು. ವಿಶೇಷ ಚೇತನರ ಬಗ್ಗೆ ಕಾಳಜಿ ವಹಿಸಿ ಲಸಿಕೆ ನೀಡುವಲ್ಲಿ ಆದ್ಯತೆ ಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು. ಈ ಸಂದರ್ಭ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಹದೇವು ಇತರರು ಹಾಜರಿದ್ದರು.