ಚಾಮರಾಜನಗರ: ದೇಶದಲ್ಲಿ ಉಂಟಾಗುತ್ತಿದ್ದ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮಾನವತಾವಾದವನ್ನು ಪ್ರತಿಪಾದಿಸಿದವರು ಅಪ್ರತಿಮ ರಾಷ್ಟ್ರಪ್ರೇಮಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸುವರ್ಣ ಗಂಗೋತ್ರಿ ಸಭಾಂಗಣದಲ್ಲಿಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜೈ ಭುವನೇಶ್ವರಿ ಕನ್ನಡ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ನ ದಿಬನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವತಾವಾದದ ಪ್ರತಿಪಾದಕರಲ್ಲಿ ಬಹುದೊಡ್ಡ ಹೆಸರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರದ್ದು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಅಂದಿನ ರಾಷ್ಟ್ರನಾಯಕರಲ್ಲಿ ನಡೆಯುತ್ತಿದ್ದ ಸೈದ್ಧಾಂತಿಕ ವಾದ-ವಿವಾದಗಳು, ಸಮಾಜವಾದ, ವಿಮರ್ಶಾವಾದಗಳ ನಡುವೆಯೇ ರಾಷ್ಟ್ರಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಯುವಕರಲ್ಲಿ ದೇಶಪ್ರೇಮವನ್ನು ತುಂಬಿದ ದೀನದಯಾಳ್ ಅವರು ಗಾಂಧೀಜಿಯವರ ಕನಸಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದವರು ಎಂದರು.
ತಾನು ಬೆಳೆಯುವ ಜೊತೆಗೆ ಇತರರನ್ನು ಬೆಳಸುವ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಪಂಡಿತ್ ದೀನ ದಯಾಳ್ ಅವರು ಸರಳ ಜೀವಿಯಾಗಿದ್ದರು. ದೀನರ ಬಗ್ಗೆ ದಯೆ, ಕಾಳಜಿ ಹೊಂದಿ ಅವರ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟರು. ಭಾರತೀಯ ಪರಂಪರೆಯ ಮೂಲತತ್ವವನ್ನು ಜನರಿಗೆ ತಿಳಿಸಲು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದರು. ಪಂಡಿತ್ ದೀನದಯಾಳರ ಆದರ್ಶ ಜೀವನ, ತಾತ್ವಿಕ ಚಿಂತನೆ, ಉದಾರ ವಿಚಾರಧಾರೆಗಳನ್ನು ಇಂದಿನ ಯುವಪೀಳೆಗೆ ಅಳವಡಿಸಿಕೊಳ್ಳಬೇಕು ಎಂದು ಪ್ರದೀಪ್‌ಕುಮಾರ್ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಆರ್. ಮಹೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ಅವರ ಮುಂದುವರೆದ ವ್ಯಕ್ತಿತ್ವವೇ ಪಂಡಿತ್ ದೀನ ದಯಾಳ್ ಉಪಾಧ್ಯಾಯ. ಗ್ರಾಮಸ್ವರಾಜ್ಯ ಹಾಗೂ ಸ್ವದೇಶಿ ಚಳವಳಿ ಪರಿಕಲ್ಪನೆಗೆ ರೂಪಕೊಟ್ಟ ಪಂಡಿತ್ ಜೀ ಅವರು ಪ್ರತಿಯೊಂದು ಗ್ರಾಮಗಳು ಸ್ವಯಂಸೇವಾ ಗ್ರಾಮಗಳಾಗಿ ಸ್ವಾವಲಂಬನೆ ಸಾಧಿಸುವುದು ಅತ್ಮನಿರ್ಭರ ಯೋಜನೆಯ ಹಿಂದಿನ ಪ್ರೇರಕಶಕ್ತಿಯಾಗಿದೆ. ಇಂದಿನ ಯುವಪೀಳಿಗೆ ಪಂಡಿತ್ ಜೀ ಅವರ ಚಿಂತನೆಗಳನ್ನು ಮನನ ಮಾಡಿ ಸಮಾಜದ ಸತ್ಪ್ರಜೆಗಳಾಗಲು ಮುಂದಾಗಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಸಿ. ಸುರೇಶ್‌ಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್. ಅಧಿಕಾರಿ ಮಹೇಶ್, ಜೈ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷರಾದ ಜಿ. ಬಂಗಾರು, ನೆಹರು ಯುವ ಕೇಂದ್ರದ ಶಂಕರ ಇತರರು ಕಾರ್ಯಕ್ರಮದಲ್ಲಿ ಇದ್ದರು. 
ಕಾರ್ಯಕ್ರಮದ ಆರಂಭದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.