ಪಾಂಡವಪುರ: ಕೊರೊನಾ ಸೋಂಕಿತರ ಬಳಕೆಗಾಗಿ ಸಮಾಜ ಸೇವಕ ಬಿ.ರೇವಣ್ಣ ಅಭಿಮಾನಿಗಳ ಬಳಗದಿಂದ ಕೊಡುಗೆಯಾಗಿ ನೀಡಿದ್ದ ಮೂರು ಆಂಬುಲೆನ್ಸ್ ವಾಹನಗಳನ್ನು ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಸೀಜ್ ಮಾಡಿದ್ದರಿಂದ ತಾಲೂಕು ಆಡಳಿತ ವಿರುದ್ಧ ರೇವಣ್ಣ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಳೆದ ಮೇ. 24ರ ಸೋಮವಾರದಂದು ಸಮಾಜ ಸೇವಕ ಸಮಾಜ ಸೇವಕ, ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಅವರು ತಮ್ಮ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಕೊರೊನಾ ಸೋಂಕಿತರ ನೆರವಿಗಾಗಿ ಮೂರು ಆಂಬುಲೆನ್ಸ್ ಗಳನ್ನು ನೀಡಿದ್ದರು. ಆ ಆಂಬ್ಯುಲೆನ್ಸ್ ವಾಹನಗಳ ಮೇಲೆ ಹಾಕಲಾಗಿರುವ ಬಿ.ರೇವಣ್ಣ ಅವರ ಭಾವಚಿತ್ರ ಹಾಗೂ ಬಿ.ರೇವಣ್ಣ ಅಭಿಮಾನಿಗಳ ಬಳಗ ಎಂಬ ಸ್ಟಿಕರ್‌ಗಳನ್ನು ಕಿತ್ತು ಹಾಕುವಂತೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಸೂಚಿಸಿ ರೋಗಿಗಳ ಸಮೇತ ಮೂರು ಆಂಬುಲೆನ್ಸ್ ವಾಹನಗಳನ್ನು ಸೀಜ್ ಮಾಡಿದ್ದರು.

ತಾಲೂಕು ಆಡಳಿತ ಈ ಕ್ರಮಕ್ಕೆ ಬಿ.ರೇವಣ್ಣ ಅಭಿಮಾನಿಗಳ ಬಳಗದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಈ ಕುರಿತು ಸ್ಪಷ್ಟನೆ ನೀಡಬೇಕು. ಜತೆಗೆ ಆಂಬುಲೆನ್ಸ್ ವಾಹನಗಳನ್ನು ರೋಗಿಗಳ ಸೇವೆಗೆ ಬಿಡುಗಡೆಗೊಳಿಸಬೇಕು ಎಂದು ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರನ್ನು ಒತ್ತಾಯಿಸಿದರು.

ಸ್ವಂತ ಖರ್ಚಿನಲ್ಲಿ ನಮ್ಮ ನಾಯಕರಾದ ಸಮಾಜ ಸೇವಕ ಬಿ.ರೇವಣ್ಣ ಅವರು ನೀಡಿರುವ ಮೂರು ಆಂಬುಲೆನ್ಸ್‌ ಗಳನ್ನು ಸೀಜ್ ಮಾಡುವ ಅಧಿಕಾರವನ್ನು ನಿಮಗೆ ನೀಡಿದವರಾರು ಎಂದು ಪ್ರಶ್ನಿಸಿದರಲ್ಲದೇ? ಕೊರೊನಾ ಸಂದರ್ಭದಲ್ಲಿ ಈ ರೀತಿ ದಾನಿಗಳು ಕೊಡುಗೆ ನೀಡುವ ಆಂಬುಲೆನ್ಸ್ ವಾಹನಗಳ ಮೇಲೆ ದಾನಿಗಳ ಭಾವಚಿತ್ರ ಹಾಕಬಾರದು ಎಂಬುದು ಯಾವ ಕಾನೂನಿನಲ್ಲಿದೆ ಎಂಬುದನ್ನು ತಾಲೂಕು ಆಡಳಿತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಆಗ ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು, ಬಿ.ರೇವಣ್ಣ ಅಭಿಮಾನಿಗಳ ಸಮಸ್ಯೆಗಳನ್ನು ಆಲಿಸಿ, ಜಿಲ್ಲಾಧಿಕಾರಿಗಳಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ, ಈಗ ಆಂಬುಲೆನ್ಸ್ ವಾಹನಗಳನ್ನು ಬಿಟ್ಟು ಕಳುಹಿಸುವಂತೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್‌ಗೆ ಸೂಚಿಸುವ ಮೂಲಕ ಆಂಬುಲೆನ್ಸ್ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇನ್ನು ಮೂರು ಆಂಬುಲೆನ್ಸ್ ವಾಹನಗಳನ್ನು ಸೀಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಅವರು, ಇದರಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಕೈವಾಡವಿದ್ದು, ಅಧಿಕಾರಿಗಳ ಮೂಲಕ ವಾಹನ ಸೀಜ್ ಮಾಡಿಸುವ ಮೂಲಕ ಕೀಳುಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

By admin