ಮೈಸೂರು: ಸಾರ್ವಜನಿಕರಲ್ಲಿ ಕೊರೊನಾ ತಪಾಸಣೆ ಮತ್ತು ಲಸಿಕೆ ನೀಡುವ ಮೂಲಕ ಮೈಸೂರಿನಲ್ಲಿ ಹೆಚ್ಚಿರುವ ಕೊರೊನಾವನ್ನು ನಿಯಂತ್ರಿಸಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಪೈಲಟ್ ಪ್ರಾಜೆಕ್ಟ್ ಕಾರ್ಯಕ್ರಮ ನಡೆಸಲಾಗುತ್ತಿದ್ದು, ನಗರದ ನಾಲ್ಕು ಕ್ಷೇತ್ರಗಳ ಪೈಕಿ ಮೊದಲಿಗೆ ಕೆ.ಆರ್.ಕ್ಷೇತ್ರದಿಂದಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಮಾಹಿತಿ ನೀಡಿದ್ದಾರೆ.
ಮೈಸೂರನ್ನು ಕೊರೊನಾ ಮುಕ್ತಗೊಳಿಸಲು ಪಾಲಿಕೆ ಪಣತೊಟ್ಟಿರುವ ಹಿನ್ನಲೆಯಲ್ಲಿ ಇದರ ಭಾಗವಾಗಿ , ಜೂನ್ 16 ಮತ್ತು 17 ರಂದು ಕೆ.ಆರ್.ಕ್ಷೇತ್ರದ ಎಲ್ಲಾ 19ವಾರ್ಡ್‌ಗಳ ಒಟ್ಟು 270 ಮತಗಟ್ಟೆ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದು, ಕ್ಷೇತ್ರ ವ್ಯಾಪಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್, ಜನರಲ್ ಟೆಸ್ಟ್ ನಡೆಸುವ ಪೈಲಟ್ ಪ್ರಾಜೆಕ್ಟ್ ಅನ್ನು ಆಯೋಜಿಸಲಾಗಿದೆ, ಇದರಿಂದ ಪ್ರತಿಯೊಬ್ಬರನ್ನು ತಪಾಸಣೆಗೊಳಿಸುವ ಮೂಲಕ ಬೇಗ ಕೋವಿಡ್ ಪತ್ತೆಗೆ ಸಹಕಾರಿಯಾಗಲಿದೆ. ಅಲ್ಲದೇ ನಗರವನ್ನು ಕೋವಿಡ್ ಮುಕ್ತಗೊಳಿಸಲು ಬಹುದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.
ಜೂನ್ 16 ಮತ್ತು 17 ರಂದು ಈ ಕಾರ್ಯಕ್ರಮವಿದ್ದು, ಅಗತ್ಯಬಿದ್ದರೆ 18 ರಂದು ಕೂಡ ಮುಂದುವರಿಸಲಿದ್ದೇವೆ, ಪ್ರತಿ ಮತಗಟ್ಟೆ ಕೇಂದ್ರದಲ್ಲೂ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೋಂದಣಿ ಕಾರ್ಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಲಿದ್ದು, ಕೆ.ಆರ್.ಕ್ಷೇತ್ರದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಹಾಗೂ ಕುಟುಂಬದವರ ಆರೋಗ್ಯದ ಹಿತದೃಷ್ಠಿಯಿಂದ ತಪ್ಪದೇ ಆಧಾರ್ ಕಾರ್ಡ್, ಮೊಬೈಲ್ ತೆಗೆದುಕೊಂಡು ನಿಮ್ಮ ನಿಮ್ಮ ಮತಗಟ್ಟೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಒಟ್ಟು ಕ್ಷೇತ್ರದಲ್ಲಿ 3ಲಕ್ಷ ಮಂದಿ ಜನಸಂಖ್ಯೆ ಇದ್ದು, ಇದರಲ್ಲಿ 75 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ, ಒಟ್ಟು 6386 ಮಂದಿಗೆ ಪಾಸಿಟಿವ್ ಬಂದಿದ್ದು, 169ಮಂದಿ ಮೃತಪಟ್ಟಿದ್ದಾರೆ. ಈಗ ಕನಿಷ್ಠ 1 ಲಕ್ಷ ಮಂದಿಗೆ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಈಗಾಗಲೇ ಪ್ರತಿ ಮನೆ ಮನೆಗೂ ಕರಪತ್ರ ಹಂಚಿ ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಪಾಲಿಕೆ ಸಿಬ್ಬಂದಿಗಳು ಪ್ರಚಾರ ಮಾಡಿದ್ದಾರೆ, ನಮ್ಮ ಉದ್ದೇಶ ಎಲ್ಲರ ಆರೋಗ್ಯ ರಕ್ಷಣೆ ಅಷ್ಟೇ ಎಂದು ಹೇಳಿದರು.
ಪ್ರತಿ ಮತಗಟ್ಟೆ ಕೇಂದ್ರಕ್ಕೂ ವಿವಿಧ ಇಲಾಖೆಗಳ 270 ಮಂದಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ, ಅಲ್ಲದೇ ಪ್ರತಿ ಬೂತ್‌ಗೂ 4 ಮಂದಿ ಶಿಕ್ಷಕರನ್ನೂ ನೋಂದಣಿ ಮಾಡಿಕೊಳ್ಳಲು ನೇಮಿಸಿದ್ದು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನಗರದ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ನೇಮಿಸಲಾಗಿದೆ, ಅಲ್ಲದೇ ಪ್ರತಿ ಬೂತ್‌ಗೂ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಹಾಕಲಾಗಿದೆ ಎಂದರು.
ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಂತಹ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು, ಇದಕ್ಕಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸದ್ಯ 500 ಕ್ಕೂ ಹೆಚ್ಚು ಬೆಡ್‌ಗಳನ್ನು ಮೀಸಲಿಡಲಾಗಿದೆ, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಬೆಡ್ ಸಿಗಲಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ, ಅಲ್ಲದೇ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಕರೆದೊಯ್ಯಲು 100 ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಸುತ್ತಾಡುವ ನಿರ್ಗತಿಕರಿಗೆ ಜೂನ್ 16 ರಂದು ಮಧ್ಯಾಹ್ನ 12.30 ಗಂಟೆಗೆ ಕಾಡಾ ಕಚೇರಿ ಆವರಣದಲ್ಲಿ ಉಚಿತ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ, ಅದೇ ದಿನ ತಿಲಕ್ ನಗರದಲ್ಲಿರುವ ಕಿವುಡರ ಶಾಲೆ ಆವರಣದಲ್ಲಿ ವಿಕಲಚೇತನರಿಗೆ ಮತ್ತು ಪುರಭವನದ ಆವರಣದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಮಾಹಿತಿ ನೀಡಿ ನಗರದ ನಾಲ್ಕು ಕ್ಷೇತ್ರ ವ್ಯಾಪ್ತಿಯಲ್ಲೂ ಈ ಪೈಲಟ್ ಪ್ರಾಜೆಕ್ಟ್ ಕಾರ್ಯಕ್ರಮ ನಡೆಯಲಿದೆ, ಪ್ರತಿ ಮತಗಟ್ಟೆ ಕೇಂದ್ರದಲ್ಲೂ ಪರೀಕ್ಷೆ ನಡೆಸುವುದರಿಂದ ಹೆಚ್ಚಿನ ಸಿಬ್ಬಂದಿ ಬೇಕಾಗಲಿದ್ದಾರೆ, ಈ ಉದ್ದೇಶದಿಂದ ಮೊದಲಿಗೆ ಕೆಆರ್ ಕ್ಷೇತ್ರದಲ್ಲಿ ನಡೆಯಲಿದೆ, ನಂತರ ಉಳಿದ ಮೂರು ಕ್ಷೇತ್ರಗಳಲ್ಲಿ ನಡೆಸಲು ಪಾಲಿಕೆ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.