ಮೈಸೂರು: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಸಿಗದೆ ಕೆಲವು ಸೋಂಕಿತರು ಸಾವನ್ನಪ್ಪುತ್ತಿರುವ ಘಟನೆಗಳು ಕಣ್ಣಮುಂದೆಯೇ ನಡೆಯುತ್ತಿದ್ದರೂ ಕೆಲವರು ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಿ ಹಣ ಸಂಪಾದಿಸುವ ದಂಧೆಗಿಳಿದಿರುವುದು ದುರಂತವೇ ಸರಿ.
ಎರಡು ದಿನಗಳ ಹಿಂದೆಯಷ್ಟೆ ಚಾಮರಾಜನಗರ ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ೧೨ ಆಕ್ಸಿಜನ್ ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಮೈಸೂರಿನಲ್ಲಿಯೂ ಈ ದಂಧೆ ಜಿಗಿತುಕೊಂಡಿರುವುದು ಬೆಳಕಿಗೆ ಬಂದಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆಕ್ಸಿಜನ್ ಸಿಲಿಂಡರ್ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ನಿವಾಸಿ ಮಧುಕುಮಾರ್ (೩೭) ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಈತ ಆಕ್ಸಿಜನ್ ಸಿಲಿಂಡರ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದನು ಎಂದು ಹೇಳಲಾಗಿದೆ. ಈಗಾಗಲೇ ಜಿಲ್ಲೆ ಸೇರಿದಂತೆ ಹಲವೆಡೆ ಆಕ್ಸಿಜನ್ ಸಿಲಿಂಡರ್ ಗಳಿಗೆ ಬಹು ಬೇಡಿಕೆಯಿರುವುದನ್ನು ಅರಿತು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದನು.
ಈ ಕುರಿತಂತೆ ಖಚಿತ ಮಾಹಿತಿ ಸಂಗ್ರಹಿಸಿದ ಮೈಸೂರು ನಗರ ಸಿಸಿಬಿ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಜೆ.ಪಿ.ನಗರದ ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ಹಾಗೂ ವರ್ತುಲ ರಸ್ತೆಯ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗ ಯಾವುದೇ ದಾಖಲಾತಿಗಳು ಇಲ್ಲದೆ, ಅಕ್ರಮವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆಕ್ಸಿಜನ್ ತುಂಬಿದ್ದ ಜಂಬು (ಡಿ ಟೈಪ್) ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ನ್ನು ಜತೆಯಲ್ಲಿದ್ದ ಮಧುಕುಮಾರ್ ನನ್ನು ಬಂಧಿಸಿ ಆತನ ಬಳಿಯಲ್ಲಿದ್ದ ಆಕ್ಸಿಜನ್ ತುಂಬಿದ್ದ ೦೧- ಜಂಬು (ಡಿ ಟೈಪ್)ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ನ್ನು ವಶಪಡಿಸಿಕೊಂಡಿದ್ದಾರೆ ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

By admin